ನವದೆಹಲಿ: ನೀಟ್ ವಿವಾದಕ್ಕೆ ಸಂಬಂಧಿಸಿ ಗುರುವಾರ ತಡರಾತ್ರಿ ಪ್ರಧಾನಿ ಮೋದಿ ಮಾಡಿಬಿಟ್ಟ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ 27 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ವಿಡಿಯೋಗೆ 1.5 ಕೋಟಿ ಲೈಕ್ಸ್, 13 ಲಕ್ಷ ಕಾಮೆಂಟ್‌ಗಳು ಬಂದಿದ್ದು, 12 ಲಕ್ಷ ಜನ ರಿಪೋಸ್ಟ್ ಮಾಡಿದ್ದಾರೆ. 65 ಲಕ್ಷ ಶೇರ್ ಆಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಈ ವಿಡಿಯೋ ಮಾಡಿಬಿಟ್ಟ ಒಂದೇ ರಾತ್ರಿಯಲ್ಲಿ ಮೋದಿ ಇನ್‌ಸ್ಟಾ ಹಿಂಬಾಲಕರ ಸಂಖ್ಯೆ 10 ಲಕ್ಷ ಜಾಸ್ತಿಯಾಗಿದೆ. ಗುರುವಾರ ರಾತ್ರಿಯವರೆಗೆ 101 ದಶಲಕ್ಷ ಇದ್ದ ಫಾಲೋವರ್‌ಗಳು, ಒಂದೇ ರಾತ್ರಿಯಲ್ಲಿ 102 ದಶಲಕ್ಷಕ್ಕೆ ಏರಿಕೆ ಆಗಿದ್ದಾರೆ. ಇನ್ನು ಇದೇ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ 11.7 ಕೋಟಿ ಜನ ವೀಕ್ಷಿಸಿದ್ದು, 70 ಲಕ್ಷ ಜನ ಲೈಕ್ ಮಾಡಿದ್ದಾರೆ. 5.55 ಲಕ್ಷ ಕಾಮೆಂಟ್ ಬಂದಿದೆ. ಜತೆಗೆ 2.4 ಲಕ್ಷ ಶೇರ್ ಆಗಿದೆ.
ಪ್ರತಿಕ್ರಿಯೆಗೆ ಮೋದಿ ಧನ್ಯವಾದ: ನಮ್ಮ ಬಾಂಧವ್ಯ ಮತ್ತಷ್ಟು ಗಟ್ಟಿ ತಡರಾತ್ರಿ ಹಂಚಿಕೊಂಡಿದ್ದ ವಿಡಿಯೋ ಸಂದೇಶಕ್ಕೆ ಯುವಕರು ನೀಡಿದ ಪ್ರತಿಕ್ರಿಯೆ ಹಾಗೂ ಸಕಾರಾತ್ಮಕ ಸಲಹೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಧನ್ಯವಾದ ತಿಳಿಸಿದ್ದಾರೆ. ಯುವಕರ ಸಲಹೆಗಳು ಅವರೊಂದಿಗಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ ಎಂದು ಮೋದಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ, “ಧನ್ಯವಾದ ಸ್ನೇಹಿತರೇ. ನಿನ್ನೆ ರಾತ್ರಿ ನಿಮ್ಮೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ದೊರಕಿತ್ತು. ನಾನು ಹಂಚಿಕೊಂಡಿದ್ದ ವಿಡಿಯೋಗೆ ನೀವು ನೀಡಿದ ಪ್ರತಿಕ್ರಿಯೆ ಹಾಗೂ ಸಕಾರಾತ್ಮಕ ಸಲಹೆಗಳಿಗೆ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿದೆ. ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಧನ್ಯವಾದಗಳು, ಧನ್ಯವಾದಗಳು ಸ್ನೇಹಿತರೇ” ಎಂದು ಹೇಳಿದ್ದಾರೆ.
ರೀಲ್ಸ್ ಮಾಡಿ, ದೇಶದ ಯುವಕರ ಜತೆ ಸಂಪರ್ಕದಲ್ಲಿರಿ: ಸಚಿವರಿಗೆ ಪಾಠ
ಯುವ ಜನರ ಜತೆ ನಿರಂತರ ಸಂಪರ್ಕದಲ್ಲಿರಲು ಮತ್ತು ಅವರಿಗೆ ಹತ್ತಿರವಾಗುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರಿ ಎಂದು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಸಚಿವರಿಗೆ ಈ ಬಗ್ಗೆ ಪ್ರಧಾನಿ ಮೋದಿ ಪಾಠ ಮಾಡಿದ್ದು, ಕೇವಲ ಸರ್ಕಾರದ ಯೋಜನೆಗಳ ಬಗ್ಗೆ ಮಾತ್ರವೇ ಪೋಸ್ಟ್ ಮಾಡದೆ, ಯುವಕರ ಜತೆ ಪ್ರಚಲಿತ ವಿಷಯಗಳು, ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಸಂವಾದ ನಡೆಸಿ ಎಂದೂ ಹೇಳಿದ್ದಾರೆ.
ಈಗಿನ ಯುವ ಜನತೆ ಅತಿ ಹೆಚ್ಚು ಇಷ್ಟಪಡುವ ರೀಲ್ಸ್ ಮಾದರಿಯಲ್ಲೇ ವಿಡಿಯೋಗಳನ್ನು ಮಾಡಲು, ಆ ಮೂಲಕ ಸೃಜನಾತ್ಮಕ ರೀತಿಯಲ್ಲಿ ಯುವಜನರನ್ನು ತಲುಪಲು ಸಚಿವರಿಗೆ ನಿರ್ದೇಶಿಸಿರುವ ಮೋದಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇನ್‌ಸ್ಟಾ ಗ್ರಾಂದಲ್ಲಿದ್ದಾರೆ. ಅದರ ಮೂಲಕವೇ ನಾವು ಅವರನ್ನು ತಲುಪಬೇಕು. ಈ ನಿಟ್ಟಿನಲ್ಲಿ ನಾನೂ ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಮೋದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಮೋದಿ ಗುರುವಾರವಷ್ಟೇ ಇನ್‌ಸ್ಟಾಗ್ರಾಂನಲ್ಲಿ ಸೆಲ್ಪಿ ವಿಡಿಯೋ ಮಾಡುವ ಮೂಲಕ, ನೀಟ್ ವಿವಾದದ ಬಗ್ಗೆ ಹಾಗೂ ಶುಕ್ರವಾರದ ಸಚಿವ ಸಂಪುಟದಲ್ಲಿನ ಮಹತ್ವದ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದರು. ನೀಟ್ ವಿವಾದಕ್ಕೆ ಸಂಬಂಧಿಸಿ ದೇಶಾದ್ಯಂತ ಯುವಜನರ ಪ್ರತಿಭಟನೆ ತೀವ್ರಗೊಂಡಿರುವಂತೆಯೇ ಮೋದಿಯವರ ಈ ಸಲಹೆ ಮಹತ್ವ ಪಡೆದಿದೆ.




