ಭಟ್ಕಳ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದ ಖಾಸಗಿ ಹೋಮ್ಸ್ಟೇಯೊಂದರಲ್ಲಿ ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯುವಕನ ಸಾವಿನ ಕುರಿತು ಕುಟುಂಬಸ್ಥರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಪನೆ ಗ್ರಾಮದ ನಿವಾಸಿ ವಿರೇಶ್ ಆರ್. (25) ಮೃತಪಟ್ಟ ಯುವಕ. ಈ ಕುರಿತು ಮೃತನ ತಂದೆ ರುದ್ರಪ್ಪ ಚನ್ನಬಸಪ್ಪ (55) ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ವಿರೇಶ್ ಕಳೆದ 4 ದಿನಗಳ ಹಿಂದೆ ಆಶಾ ಎಂಬ ಮಹಿಳೆಯೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿ, ಇಲ್ಲಿನ ಖಾಸಗಿ ಹೋಮ್ಸ್ಟೇಯಲ್ಲಿ ತಂಗಿದ್ದರು. ಜುಲೈ 28ರ ಮುಂಜಾನೆ ಸುಮಾರು 12.30ರ ವೇಳೆಗೆ ಹೋಮ್ಸ್ಟೇ ಕೊಠಡಿಯ ಫ್ಯಾನ್ಗೆ ಬೆಡ್ಶೀಟ್ ಕವರ್ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವಿರೇಶನ ಮೃತದೇಹ ಪತ್ತೆಯಾಗಿದೆ.
ತಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದರ ಕುರಿತು ಸಂಶಯವಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತನ ತಂದೆ ಒತ್ತಾಯಿಸಿದ್ದಾರೆ.
ಘಟನೆ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




