ಪೆರ್ಲ: ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಶಾರದಾ ಮರಾಟಿ ಮಹಿಳಾ ವೇದಿಕೆ ಪೆರ್ಲ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಸಹಯೋಗದೊಂದಿಗೆ ಪೆರ್ಲದ ಬಜಕೂಡ್ಲಿನಲ್ಲಿರುವ ಮರಾಟಿ ಬೋರ್ಡಿಂಗ್ ಹಾಲ್ ನ 5ನೇ ವಾರ್ಷಿಕೋತ್ಸವವು ಅ.15ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಇದರ ಅಂಗವಾಗಿ ಅಂದು ಬೆಳಗ್ಗೆ ಗಣಪತಿ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾಗ್ದೇವಿ ಭಜನಾ ಮಂಡಳಿ ನಲ್ಕ ಇವರಿಂದ ಭಜನೆ ಜರಗಿತು.
ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಐಆರ್ ಎಸ್ ಡೆಪ್ಯುಟಿ ಕಮೀಶನರ್ ಡಾ.ಮಿತೋಶ್ ರಾಘವನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮರಾಟಿ ಜನಾಂಗವು ಸಮಾಜಕ್ಕೆ ಹಲವು ತರದಲ್ಲಿ ತೆರೆದುಕೊಳ್ಳುತ್ತಿದ್ದು ಎಲ್ಲರೂ ಸಾಮಾಜಿಕವಾಗಿ ಸಂಘಟಿತರಾದರೆ ಮಾತ್ರ ಸರ್ಕಾರಿ ಸಹಿತ ಇತರ ಸವಲತ್ತುಗಳು ಲಭಿಸಲು ಸಾಧ್ಯ. ಇದಕ್ಕಾಗಿ ಹಿಂದಿನಿಂದ ಇಂದಿನವರೆಗೆ ಹೋರಾಟ ನಡೆಸಿದವರ ತ್ಯಾಗ ಸ್ಮರಣೀಯ ಎಂದರು.
ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಆಶೋಕ್ ನಾಯ್ಕ್ ಕೆದಿಲ ಮಾತನಾಡುತ್ತಾ ಮರಾಟಿ ಜನಾಂಗದವರನ್ನು ಗಡಿನಾಡದ ಕೇರಳ-ಕರ್ನಾಟಕದಲ್ಲಿ ಎರಡು ರೀತಿಯ ಕಾನೂನು ಮಾಡಿಕೊಂಡು ಸರಕಾರಗಳು ಆಡಳಿತ ನಡೆಸುತ್ತಿದ್ದು ಇದರ ವಿರುದ್ಧ ಎರಡು ಕಡೆಯಿಂದಲೂ ಸಾಮಾಜಿಕ ಹೋರಾಟ ಅನಿವಾರ್ಯ ಎಂದರು. ಕೆ.ಜಿ.ನಾಯ್ಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಶಾರದಾ ಮರಾಟಿ ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜ ಅಡ್ಯನಡ್ಕ, ಸತೀಶ್ ಕುಮಾರ್ ಕಯ್ಯಾರು, ಕೆನರಾ ಬ್ಯಾಂಕಿನ ನಿವೃತ್ತ ಸೀನಿಯರ್ ಮೇನೆಜರ್ ಎನ್.ಪಿ.ನಾಯ್ಕ್, ಶೋಭಾ ಗೋಪಾಲನ್ ಮಂಜೇಶ್ವರ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಸಸೆಲ್ಸಿಯಿಂದ ಮೇಲ್ಪಟ್ಟು ಸ್ನಾತಕೋತ್ತರ ಪದವಿಯವರೆಗೆ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 2022-23ರಲ್ಲಿ ಸೇವಾ ನಿವೃತ್ತರಾದ ಸಂಘದ ಸದಸ್ಯರಿಗೆ ಹಾಗೂ 5 ಮಂದಿ ಸಮಾಜದ ಹಿರಿಯರಿಗೆ, ರಾಷ್ಟ್ರ, ರಾಜ್ಯ ಮಟ್ಟದಲ್ಲಿ ವಿವಿಧ ಸಾಧನಗೈದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡ್ ಸ್ವಾಗತಿಸಿ ಲಕ್ಷ್ಮಿ ಟೀಚರ್ ನಲ್ಕ ವಂದಿಸಿದರು. ದಯಾನಂದ ಪಟೇಲ್ ಬಾಳೆಗುಳಿ, ಕುಸುಮಾವತಿ ಟೀಚರ್, ಭವಾನಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಮಾಜದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು.