ರೈಲ್ವೆ ಓವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ಸಿಲುಕಿಕೊಂಡ ಲಾರಿ: ಸಂಚಾರಕ್ಕೆ ಅಡ್ಡಿ..!

Share with

ಬಂಟ್ವಾಳ: ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೆ ಓವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ಸಿಲುಕಿಕೊಂಡು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾದ ಘಟನೆ ಬಿ.ಸಿ ರೋಡಿನ ಕೈಕಂಬದ ಮೊಡಂಕಾಪು ಎಂಬಲ್ಲಿ ಫೆ.13 ರಂದು ಬೆಳಿಗ್ಗೆ ನಡೆದಿದೆ.

ಪವಿತ್ರ ಗುತ್ತಿಗೆ ಸಂಸ್ಥೆಗೆ ಸೇರಿದ ಸೊತ್ತುಗಳಾಗಿದ್ದು, ಬೆಂಜನಪದವು ಸೈಟ್ ನಿಂದ ಪುತ್ತೂರು ಸವಣೂರುನಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ಅನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗುವ ವೇಳೆ ಈ ಘಟನೆ ಸಂಭವಿಸಿದೆ.

ಲಾರಿಯಲ್ಲಿ ರೈಲ್ವೆಯ ಓವರ್ ಬ್ರಿಡ್ಜ್ ನ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಲೋಡ್ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಈ ಘಟನೆಯಿಂದ ರೈಲ್ವೆ ಇಲಾಖೆಗೆ ಸೇರಿದ ಕಬ್ಬಿಣದ ರಾಡ್ ತುಂಡಾಗಿ ಲಾರಿಯ ಮೇಲೆ ಬಿದ್ದಿದ್ದು, ಅದೃಷ್ಟ‌ವಶಾತ್ ಯಾವುದೇ ಅಪಾಯಕಾರಿ ಘಟನೆ ನಡೆದಿಲ್ಲ.

ಸ್ಥಳಕ್ಕೆ ರೈಲ್ವೆ ಇಲಾಖೆಯವರು ಆಗಮಿಸಿದ್ದಾರೆ. ಘಟನೆ ನಡೆದ ಸಂದರ್ಭ ಸಂಚಾರಕ್ಕೆ ಅಡಚಣೆಯಾಗಿದ್ದು, ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಬಳಸಿ ಲಾರಿಯನ್ನು ಬದಿಗೆ ಸರಿಸಿ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಟ್ಟರು. ಎ.ಎಸ್.ಐ ಗಳಾದ ಜನಾರ್ಧನ, ಸುರೇಶ್ ಪಡಾರ್ ಮತ್ತು ಸಿಬ್ಬಂದಿ ಅಭಿಷೇಕ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.


Share with

Leave a Reply

Your email address will not be published. Required fields are marked *