ಉಡುಪಿ: ದಸರಾ ರಜೆಯ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಅ. 22ರಿಂದ ಮತ್ತೆ ಶಾಲೆಗಳತ್ತ ಹೆಜ್ಜೆ ಇಡಲಿದ್ದಾರೆ.
ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಅ. 2ರಿಂದ ಆರಂಭವಾಗಿದ್ದ ದಸರಾ ರಜೆ ಅ. 21ಕ್ಕೆ ಪೂರ್ಣಗೊಂಡಿದೆ. ಅದರಂತೆ ಅ. 22ರಂದು ಶಾಲೆಗಳಲ್ಲಿ ತರಗತಿಗಳು ಪುನಃ ಆರಂಭವಾಗಲಿವೆ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಿಗೂ ಅ. 21ರ ವರೆಗೆ ದಸರಾ ರಜೆ ಇದ್ದು, ಅ. 22ರಂದು ಎಂದಿನಂತೆ ತರಗತಿಗಳು ಆರಂಭವಾಗಲಿವೆ.
ರಜೆ ಮುಗಿಸಿ ವಿದ್ಯಾರ್ಥಿಗಳು ಮತ್ತೆ ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆಯನ್ನು ಒಂದು ದಿನ ವಿಸ್ತರಿಸಲಾಗಿದ್ದು, ಅ. 23ರಂದು ಶಾಲೆಗಳು ಪುನರಾರಂಭವಾಗಲಿದೆ.




