ಮಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಬಳಿಕ 48 ದಿನಗಳ ಮಂಡಲೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕರಾವಳಿಗೆ ವಾಪಸ್ ಆಗಿದ್ದಾರೆ. ಶ್ರೀಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಹಾಗೂ ವಿಹೆಚ್ಪಿ ಮುಖಂಡರು ಸ್ವಾಗತಿಸಿದರು.


ಮಂಗಳೂರಿನಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರು ಮಾತನಾಡಿ, ಶ್ರೀರಾಮನ ಸೇವೆ ಮಾಡಿದ್ದು ದೊಡ್ಡ ಸುಯೋಗ. ಕೃಷ್ಣೈಕ್ಯರಾದ ವಿಶ್ವೇಶ ತೀರ್ಥ ಸ್ವಾಮಿಜಿ ಅವರು ಈ ಭಾಗ್ಯ ನಮಗೆ ಕರುಣಿಸಿದ್ದಾರೆ. ಕರ್ನಾಟಕ ದಿಂದ ದಕ್ಷಿಣ ಭಾರತದ ರಾಜ್ಯಗಳಿಂದ ನಿರಂತರವಾಗಿ ಭಕ್ತರು ಬರುತ್ತಿದ್ದರು. ಮೋದಿಜಿ ಅವರ ಕಾಲದಲ್ಲಿ ಇಂತಹ ಬೆಳವಣಿಗೆ ಕಾಣುತ್ತಿದ್ದೆವೆ. ಇಂತಹ ಸರಕಾರ ಪುನಃ ದೇಶದಲ್ಲಿ ಆಡಳಿತಕ್ಕೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ಹಿಂದೂಗಳ ಪಾಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರವಾದ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯ ನಂತರ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜನವರಿ 30 ರಿಂದ ಮಾರ್ಚ್ 11ವರೆಗೆ ಶ್ರದ್ಧಾಭಕ್ತಿಯಿಂದ ಮಂಡಲ ಪೂಜೆ ನೆರವೇರಿದೆ. ಇದೀಗ ಆ ಪವಿತ್ರ ಕ್ಷೇತ್ರದಿಂದ ಪುಣ್ಯಭೂಮಿ ತುಳುನಾಡಿಗೆ ಆಗಮಿಸಿರುವ ಶ್ರೇಷ್ಠ ಸಂತರನ್ನು ಸ್ವಾಗತಿಸುವ ಸೌಭಾಗ್ಯ ನಮ್ಮೆಲ್ಲರದ್ದು ಎಂದು ಹೇಳಿದರು.
ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರು ಅಯೋಧ್ಯೆ ರಾಮ ಮಂದಿರದಲ್ಲಿ ಮಂಡಲ ಪೂಜೆ ಮಾಡಿದರು. ಮೊದಲ 44 ದಿನ ನಿತ್ಯ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆದವು. ಪ್ರತಿನಿತ್ಯ ಸಂಜೆ ಉತ್ಸವ ನಡೆಯಿತು. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇಕ ಜರುಗಿತು.




