ಸೌಜನ್ಯ ಹೆಸರಲ್ಲಿ ಹೆಲ್ಪ್ ಲೈನ್ ತೆರೆದು ವಂಚನೆ.! ಬೆಂಗಳೂರಿನ ಮಹಿಳೆ ವಿರುದ್ಧ ಪ್ರಕರಣ ದಾಖಲು

Share with

ಸೌಜನ್ಯ ಹೆಸರಿನಲ್ಲಿ ಹೆಲ್ಪ್ ಲೈನ್ ತೆರೆದು ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್​ನ ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ‌ ಅನ್ವಯ ಪ್ರಕರಣ ದಾಖಲಾಗಿದೆ.

ದೂರುದಾರ ರಾಜೇಶ್ ವೃತ್ತಿಯಲ್ಲಿ ಗಾಯಕರಾಗಿದ್ದು, ಅರವಿಂದ್ ವಿವೇಕ್​ ಎಂಬ ಫೇಸ್​ಬುಕ್​ ಪೇಜ್​​ನಲ್ಲಿ ರಾಜೇಶ್ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ರಾಜೇಶ್​ ಅವರಿಗೆ ಸಂಧ್ಯಾ 2024ರಲ್ಲಿ ಫೇಸ್​ಬುಕ್​ ಮೂಲಕ ಪರಿಚಯವಾಗಿದ್ದಾಳೆ. ಸೌಜನ್ಯ ಹೆಲ್ಪ್​​ಲೈನ್​ ಹೆಸರಿನಲ್ಲಿ ವಂಚನೆಗೊಳಗಾದವರಿಗೆ ನೆರವಾಗುತ್ತಿದ್ದೇನೆ. ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಅಂತ ರಾಜೇಶ್​ ಅವರಿಗೆ ನಂಬಿಸಿದ್ದಾಳೆ.

ಆಗ, ರಾಜೇಶ್​ ಅವರು ಬಂಟ್ವಾಳ‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್​ಗೆ ತಿಳಿಸಿದ್ದಾರೆ. ಆಗ, ಸಂಧ್ಯಾ ಹೈಕೋರ್ಟ್​ನಲ್ಲಿ ಕೇಸ್ ಬಗೆಹರಿಸುತ್ತೇನೆ, ಆದರೆ, ಸ್ವಲ್ಪ ಖರ್ಚು ಇದೆ ಎಂದಿದ್ದಾಳೆ.
ನಂತರ, ರಾಜೇಶ್​ ಅವರಿಂದ ಸಂಧ್ಯಾ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾಳೆ. ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್​ ಅವರು ಸಂಧ್ಯಾಗೆ ಪ್ರಶ್ನಸಿದ್ದಾರೆ.

ಆಗ, ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಸಂಧ್ಯಾ ಹೇಳಿದ್ದಾಳೆ. ಸಂಧ್ಯಾ ಮಾತು ಕೇಳಿ ಸಂಶಯಗೊಂಡ ರಾಜೇಶ್​ ಅವರು ಕೋರ್ಟ್​ಗೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ಕೇಳಿದ್ದಾರೆ. ಸಂಧ್ಯಾ ಕೈಕಾಲು ಮುರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ ರಾಜೇಶ್​ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಸಿದ್ದಾರೆ. ಬಿಎನ್​ಎಸ್​ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *