ಉಡುಪಿ: ಆರ್ಥಿಕತೆ, ಆರ್ಥಿಕ ನೀತಿ, ಸುಂಕ ಏರಿಳಿತ ಇತ್ಯಾದಿ ವಿಷಯಗಳ ಬಗ್ಗೆಯೇ ಸದಾ ಯೋಚಿಸುತ್ತಿರುವ ದೇಶದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಹೊಸ್ತಿಲು ಪೂಜೆ, ದೇವರ ಪೂಜಾ ಸಾಮಗ್ರಿ ಸ್ವಚ್ಛ ನಡೆಸುವ ಮೂಲಕ ಗಮನ ಸೆಳೆದದ್ದು ಮಾತ್ರವಲ್ಲ, ತಮ್ಮ ಮನೆಯಿಂದಲೇ ತಂದ ಹಿಡಿ ಅವಲಕ್ಕಿಯನ್ನು ಶ್ರೀಪಾದರ ಮೂಲಕ ಕಾಣಿಕೆ ಸಮೇತವಾಗಿ ಶ್ರೀಕೃಷ್ಣ ದೇವರಿಗೆ ಅರ್ಪಿಸಿದರು.

ಶನಿವಾರ ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಸಚಿವರು ನವಗೃಹ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ಮಹಾಪೂಜೆಯನ್ನು ಕಂಡು ಅನಂತರ ಮುಖ್ಯಪ್ರಾಣ ಹಾಗೂ ಮಧ್ವಾಚಾರ್ಯರ ಪೂಜೆಯಲ್ಲಿ ಭಾಗವಹಿಸಿದರು. ಶ್ರೀಪಾದರು ನಡೆಸುವ ಪ್ರದಕ್ಷಿಣೆ ನಮಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು.
ಆಷಾಢ ಮಾಸದ ಹುಣ್ಣಿಮೆಗೆ ಆಚರಿಸುವ ಹೊಸ್ತಿಲು ಬರೆಯುವ ಪೂಜೆಯ ನಿಮಿತ್ತ ಸಚಿವರು ಶ್ರೀಕೃಷ್ಣ ಮಠದ ಮುಖ್ಯದ್ವಾರ, ಸರ್ವಜ್ಞ ಪೀಠದ ದ್ವಾರದಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆ ನೆರವೇರಿಸಿದರು. ಅನಂತರ ಕೃಷ್ಣಮಠದ ಸುತ್ತು ಪೌಳಿಗೆ ಜೋಡಿಸಿರುವ ಕಾಷ್ಠ ಶಿಲ್ಪ ಯಾಳಿಯನ್ನು ಉದ್ಘಾಟಿಸಿದರು. ಮಠದ ಒಳಗೆ ಸಚಿವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಬಾಗಿನ ನೀಡಿ ಗೌರವಿಸಲಾಯಿತು.

ದಿಲ್ಲಿಯಿಂದ ದೆಹಲಿ (ಹೊಸ್ತಿಲು) ಪೂಜೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿಯವರು ಆಷಾಢ ಮಾಸದ ಹುಣ್ಣಿಮೆಯಂದು ನಡೆಸುವ ಹೊಸ್ತಿಲು ಪೂಜೆಯನ್ನು ನಡೆಸಿದರು. ಸಂಸ್ಕೃತದಲ್ಲಿ ದೆಹಲಿ ಅಂದರೆ ಹೊಸ್ತಿಲು. ಹೊಸ್ತಿಲು ಪೂಜೆಗೆ ದಿಲ್ಲಿಯಿಂದಲೇ ಸಚಿವರು ಬಂದಂತಾಯಿತು. ಹಾಗೆಯೇ ದೇವರ ಪಾತ್ರೆಗಳನ್ನು ಸುಧಾಮೂರ್ತಿ ಹಾಗೂ ಸಚಿವೆ ಇಬ್ಬರೂ ಸೇರಿ ಶುಚಿಗೊಳಿಸಿ ದೇವರ ಸೇವೆ ಮಾಡಿದರು.




