ನವರಾತ್ರಿ ಸಂಭ್ರಮಕ್ಕೆ ಜಿಎಸ್ ಟಿ ಇಳಿಕೆಯ ಕೊಡುಗೆ..!

Share with

ಮಂಗಳೂರು/ಉಡುಪಿ: ಮೊದಲ ದಿನದ ನವರಾತ್ರಿಯಿಂದಲೇ (ಸೆ.22) ಜಿಎಸ್‌ಟಿ ಹೊರೆ ಇಳಿಕೆ ಅನ್ವಯವಾಗುತ್ತಿರುವುದು ಉದ್ಯಮ ವಲಯದಲ್ಲಿ ಹೊಸ ಚೇತರಿಕೆ ನೀಡಿದೆ. ಈ ಬಾರಿಯ ದಸರಾ-ದೀಪಾವಳಿ ಉದ್ಯಮದ ಪಾಲಿಗೆ ಶುಭಸೂಚನೆಯಾಗಿದ್ದರೆ, ಗ್ರಾಹಕರು ಡಬಲ್ ಧಮಾಕಾದ ನಿರೀಕ್ಷೆಯಲ್ಲಿದ್ದಾರೆ.

ಈ ಮಧ್ಯೆ ರವಿವಾರ ಪ್ರಧಾನಿ ನರೇಂದ್ರ ಮೋದಿಯವರೂ ತಮ್ಮ ಭಾಷಣದಲ್ಲಿ ಸ್ವದೇಶಿ ವಸ್ತುಗಳ ಖರೀದಿ ಮಾಡುವಂತೆ ಕರೆ ನೀಡಿದ್ದಾರೆ. ಇದೂ ಸಹ ಸ್ಥಳೀಯ ಉದ್ಯಮ, ಉತ್ಪನ್ನ ಹಾಗೂ ಸ್ಥಳೀಯ ಮಾರುಕಟ್ಟೆಯನ್ನು ಗೆ ಹೊಸ ಹುಮ್ಮಸ್ಸು ತುಂಬುವ ಸಾಧ್ಯತೆ ಇದೆ.

ವಿವಿಧ ಮಳಿಗೆಗಳೂ ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿವೆ. ನವರಾತ್ರಿ ಆರಂಭದ ಮುನ್ನಾ ದಿನ ರವಿವಾರ ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಮಳಿಗೆಗಳಿಗೆ ಗ್ರಾಹಕರು ಭೇಟಿ ನೀಡಿ ವಿವಿಧ ಉತ್ಪನ್ನಗಳ ಮಾಹಿತಿ ಪಡೆಯುತ್ತಿದ್ದುದು ಕಂಡುಬಂದಿತು. ರವಿವಾರದವರೆಗೂ ಪಿತೃಪಕ್ಷ. ಅದೇ ಕಾರಣಕ್ಕೆ ಗ್ರಾಹಕರೂ ಹೊಸ ವಸ್ತುಗಳ ಖರೀದಿಯನ್ನು ಮುಂದೂಡಿದ್ದರು. ಅದೀಗ ಬಗೆಹರಿದಿದ್ದು, ಸೋಮವಾರದಿಂದ ಮಾರು ಕಟ್ಟೆಯಲ್ಲಿ ಉತ್ಸಾಹ ಕಾಣಬಹುದು. ಈ ಉತ್ಸಾಹ ದೀಪಾವಳಿ-ಕ್ರಿಸ್‌ಮಸ್‌ವರೆಗೂ ಉಳಿದೀತೆಂಬ ನಿರೀಕ್ಷೆ ಉದ್ಯಮಗಳದ್ದು.

“ಹಬ್ಬಗಳ ಸಂದರ್ಭದಲ್ಲಿ ವ್ಯಾಪಾರ ವಹಿ ವಾಟು ಹೆಚ್ಚಿರುತ್ತದೆ. ಆದರೆ ಈ ಬಾರಿ ಪರಿಷ್ಕೃತ ಜಿಎಸ್‌ಟಿ ದರದಿಂದ ಶೇ.50ರಷ್ಟು ವ್ಯಾಪಾರ ಹೆಚ್ಚುವ ನಿರೀಕ್ಷೆ ಇದೆ. ಇದು ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರ ಉತ್ಸಾಹದಲ್ಲಿ ಕಾಣುತ್ತಿದೆ.

ಹಬ್ಬದ ಕೊಡುಗೆ : ಡಬಲ್‌ ಧಮಾಕಾ?

ಹಬ್ಬಗಳ ಸಂದರ್ಭಗಳಲ್ಲಿ ವಿವಿಧ ಕಂಪೆನಿಗಳೂ ದರ ಇಳಿಕೆಗಿಂತ ವಾರಂಟಿ, ಗ್ಯಾರಂಟಿಗಳ ಆಕರ್ಷಣೆಗೆ ಮೊರೆ ಹೋಗು ತ್ತಾರೆ.

ಕೆಲವು ಉತ್ಪನ್ನಗಳಿಗೆ ಉಳಿದ ಅವಧಿಯಲ್ಲಿ ಎರಡು ವರ್ಷಗಳ ವಾರಂಟಿ ಇದ್ದರೆ, ಹಬ್ಬದ ಆಕರ್ಷಣೆಯಾಗಿ ಒಂದೋ, ಎರಡೋ ವರ್ಷಗಳಿಗೆ ವಿಸ್ತರಿಸಲಾಗುತ್ತದೆ. ಹೆಚ್ಚಾಗಿ ದಸರಾ-ದೀಪಾವಳಿ ಸಂದರ್ಭ ಇಂಥ ವಾರಂಟಿಗಳ ಆಕರ್ಷಣೆ ಹೆಚ್ಚು. ಆದ ಕಾರಣ, ಗ್ರಾಹಕರಿಗೆ ಈ ಬಾರಿ ಡಬಲ್ ಧಮಾಕ. ಮೊದಲಿಗೆ ಜಿಎಸ್‌ಟಿ ದರ ಇಳಿಕೆಯ ಹಿನ್ನೆಲೆಯಲ್ಲಿ ದರ ಇಳಿಕೆ, ಇನ್ನೊಂದು ವಾರಂಟಿ ಅವಧಿಗಳ ವಿಸ್ತರಣೆ ಸಾಧ್ಯತೆ.

ವಾಹನ ಉದ್ಯಮದಲ್ಲಿ ಚೇತರಿಕೆ

ಈ ಮಧ್ಯೆ ವಾಹನ ಮಾರಾಟ ಕ್ಷೇತ್ರದಲ್ಲಿ ಈ ಬಾರಿ ಆಶಾಭಾವ ಕಂಡುಬಂದಿದೆ. ಜಿಎಸ್‌ಟಿ ಇಳಿಕೆಯಿಂದ ದ್ವಿಚಕ್ರ ಸಹಿತ ವಿವಿಧ ವಾಹನಗಳ ದರಗಳಲ್ಲಿ ಭಾರೀ ಇಳಿಕೆಯ ಲೆಕ್ಕಾಚಾರವನ್ನು ಈಗಾಗಲೇ ಮಾಡಿರುವ ಗ್ರಾಹಕರು ವಾಹನ ಬುಕ್ಕಿಂಗ್‌ನತ್ತ ಮನಸ್ಸು ಮಾಡಿದ್ದಾರೆ. ಹೀಗಾಗಿ ಸೋಮವಾರದಿಂದ ವಾಹನ ಮಾರಾಟ ವಹಿವಾಟು ವಲಯದಲ್ಲಿ ಭಾರೀ ನಿರೀಕ್ಷೆ ಇದೆ.


Share with

Leave a Reply

Your email address will not be published. Required fields are marked *