ನವದೆಹಲಿ, ಅಕ್ಟೋಬರ್ 6: ವಿಶ್ವದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಟಾಟಾ ಗ್ರೂಪ್ ಕೂಡ ಒಂದು. ರತನ್ ಟಾಟಾ ನಿಧನದ ನಂತರ ಟಾಟಾ ಕಂಪನಿಗಳಿಗೆ ವಾರಸುದಾರರು ಯಾರು ಎಂಬುದು ಗೊಂದಲವಾಗಿತ್ತು. ನೋಯಲ್ ಟಾಟಾ ಅವರೇ ಟಾಟಾ ಟ್ರಸ್ಟ್ಸ್ (Tata Trusts) ಛೇರ್ಮನ್ ಆಗುವ ಮೂಲಕ ಟಾಟಾ ಉದ್ಯಮ ಸಾಮ್ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಈಗ ಈ ಸಾಮ್ರಾಜ್ಯದಲ್ಲಿ ಬಿರುಕು ಹೆಚ್ಚಾಗತೊಡಗಿದೆ. ಟಾಟಾ ಟ್ರಸ್ಟ್ನ ಟ್ರಸ್ಟೀಗಳ ಮಧ್ಯೆ ಭಿನ್ನಾಭಿಪ್ರಾಯಗಳು ತಲೆ ಎತ್ತಿವೆ. ಅಕ್ಟೋಬರ್ 10ರಂದು ಟಾಟಾ ಟ್ರಸ್ಟ್ಗಳ ಮಂಡಳಿಯ ಸಭೆ (Tata Trusts board meeting) ನಡೆಯಲಿದ್ದು, ಅಲ್ಲಿ ಈ ಸಮಸ್ಯೆಗಳನ್ನು ನಿವಾರಿಸಲು ಟ್ರಬಲ್ ಶೂಟ್ ಆಗಬಹುದಾ ಎನ್ನುವ ನಿರೀಕ್ಷೆ ಇದೆ.
ಟಾಟಾ ಗ್ರೂಪ್ನಲ್ಲಿ ಒಡಕು ಮೂಡಲು ಏನು ಕಾರಣ?
ಇಲ್ಲಿ ಟಾಟಾ ಗ್ರೂಪ್ನ ಒಡಕು ಅರಿಯುವ ಮುನ್ನ ಅದರ ರಚನೆ ಅರ್ಥ ಮಾಡಿಕೊಳ್ಳುವುದು ಉತ್ತಮ. ಟಾಟಾ ಗ್ರೂಪ್ನಲ್ಲಿ 26 ಲಿಸ್ಟೆಡ್ ಕಂಪನಿಗಳೂ ಸೇರಿ ಹಲವಾರು ಸಂಸ್ಥೆಗಳಿವೆ. ಇವುಗಳನ್ನು ಟಾಟಾ ಸನ್ಸ್ ಎನ್ನುವ ಕಂಪನಿ ನಿಯಂತ್ರಿಸುತ್ತದೆ. ಇದು ಹೋಲ್ಡಿಂಗ್ ಕಂಪನಿ. ಎಲ್ಲಾ ಟಾಟಾ ಕಂಪನಿಗಳೂ ಕೂಡ ಇದರ ನೇರ ನಿಯಂತ್ರಣದಲ್ಲಿ ಇರುತ್ತವೆ.
ಇನ್ನು, ಟಾಟಾ ಕುಟುಂಬದಲ್ಲಿ ಹಲವಾರು ಟ್ರಸ್ಟ್ಗಳಿವೆ. ಅವೆಲ್ಲವೂ ಸೇರಿ ಟಾಟಾ ಟ್ರಸ್ಟ್ಸ್ ಇದೆ. ಇದು ಟಾಟಾ ಕಂಪನಿಗಳ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್ನಲ್ಲಿ ಶೇ. 66ರಷ್ಟು ಪಾಲು ಹೊಂದಿದೆ. ಹೀಗಾಗಿ, ಟಾಟಾ ಟ್ರಸ್ಟ್ಸ್ ಇಡೀ ಟಾಟಾ ವ್ಯವಹಾರದಲ್ಲಿ ನಿರ್ಣಾಯಕ ಅಧಿಕಾರ ಹೊಂದಿದೆ

ಟಾಟಾ ಸನ್ಸ್ನ ಛೇರ್ಮನ್ ಎನ್ ಚಂದ್ರಶೇಖರ್ ಇದ್ದಾರೆ. ಆದರೆ, ಟಾಟಾ ಟ್ರಸ್ಟ್ಸ್ನ ಛೇರ್ಮನ್ ಆಗಿರುವುದು ನೋಯಲ್ ಟಾಟಾ. ಟಾಟಾ ಸನ್ಸ್ನ ಮುಖ್ಯ ನಿರ್ಧಾರಗಳಲ್ಲಿ ನೋಯಲ್ ಟಾಟಾ ಅವರದ್ದು ಮುಖ್ಯ ಪಾತ್ರ ಇರುತ್ತದೆ.
ಹಿಂದೆ ರತನ್ ಟಾಟಾ ಬದುಕಿದ್ದಾಗ ಅವರ ಮೇಲಿನ ಗೌರವ ಅತ್ಯುಚ್ಚವಾಗಿತ್ತು. ಬಹುತೇಕ ಎಲ್ಲಾ ಟ್ರಸ್ಟಿಗಳು, ಬೋರ್ಡ್ ಡೈರೆಕ್ಟರ್ಗಳು ರತನ್ ಟಾಟಾ ನಿರ್ಧಾರವನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ, ಅದೇ ಅದೃಷ್ಟ ನೋಯಲ್ ಟಾಟಾ ಅವರಿಗೆ ಇಲ್ಲ.
ಟಾಟಾ ಟ್ರಸ್ಟ್ಗಳಲ್ಲಿ ಯಾರಿದ್ದಾರೆ?
ಟಾಟಾ ಮನೆತನದಲ್ಲಿ ಹತ್ತಕ್ಕೂ ಹೆಚ್ಚು ವೈಯಕ್ತಿಕ ಟ್ರಸ್ಟ್ಗಳಿವೆ. ಅವುಗಳ ಪೈಕಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (ಎಸ್ಡಿಟಿಟಿ) ಮತ್ತು ಸರ್ ರತನ್ ಟಾಟಾ ಟ್ರಸ್ಟ್ (ಎಸ್ಆರ್ಟಿಟಿ) ಪ್ರಮುಖವಾದುವು. ಇವೆರಡು ಟ್ರಸ್ಟ್ಗಳೇ ಟಾಟಾ ಸನ್ಸ್ನಲ್ಲಿ ಶೇ. 51ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಎಲ್ಲಾ ಟ್ರಸ್ಟ್ಗಳು ಸೇರಿ ಶೇ. 66ರಷ್ಟು ಪಾಲು ಹೊಂದಿವೆ.
ಟಾಟಾ ಟ್ರಸ್ಟ್ಗಳ ಟ್ರಸ್ಟೀಗಳಲ್ಲಿ ಹಲವು ಗುಂಪುಗಳಾಗಿ ಹೋಗಿವೆ. ಅದರಲ್ಲಿ ಎರಡು ಪ್ರಮುಖ ಬಣ ನಿರ್ಮಾಣವಾಗಿದೆ ಎಂದು ಮಾಧ್ಯಮಗಳ ವರದಿಯಿಂದ ಗೊತ್ತಾಗುತ್ತದೆ. ಟಾಟಾ ಸನ್ಸ್ ನಾಮಿನಿ ಡೈರೆಕ್ಟರ್ಗಳಿಂದ ತಮಗೆ ಸರಿಯಾದ ಮಾಹಿತಿ ಬರುತ್ತಿಲ್ಲ ಎಂದು ಒಂದು ಗುಂಪು ಹೇಳುತ್ತಿದೆ.




