World Cup 2025: ಶತಕ ವಂಚಿತರಾದ್ರು ಸ್ಮರಣೀಯ ಇನ್ನಿಂಗ್ಸ್ ಆಡಿದ ರಿಚಾ ಘೋಷ್

Share with

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಮಳೆಯ ನಡುವೆಯೂ ಆಫ್ರಿಕಾ ಬೌಲರ್ಗಳನ್ನು ಬೆವರುವಂತೆ ಮಾಡಿದ ರಿಚಾ ಘೋಷ್ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ಮೊದಲ ಎರಡು ಪಂದ್ಯಗಳಂತೆ ಈ ಪಂದ್ಯದಲ್ಲೂ ಬ್ಯಾಟಿಂಗ್‌ ವಿಭಾಗ ಕೈಕೊಟ್ಟಿತು. ಪ್ರಮುಖ 6 ವಿಕೆಟ್ಗಳು ಕೇವಲ 102 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡವು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ನಿಭಾಯಿಸಿದ ರಿಚಾ, ತಂಡವನ್ನು 250 ರನ್ಗಳ ಗಡಿ ದಾಟಿಸಿದ್ದು ಮಾತ್ರವಲ್ಲದೆ 94 ರನ್ಗಳ ಅದ್ಭುತ ಇನ್ನಿಂಗ್ಸ್ ಕೂಡ ಆಡಿದರು.

ಒಂದೆಡೆ ತಂಡದ ಪ್ರಮುಖ ಆಟಗಾರ್ತಿಯರೇ 100 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಇನ್ನೊಂದೆಡೆ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ಏಕಾಂಗಿ ಹೋರಾಟ ಮುಂದುವರೆಸಿದರು. 94 ರನ್‌ಗಳ ಬಿರುಗಾಳಿ ಇನ್ನಿಂಗ್ಸ್ ಆಡಿದ ರಿಚಾ ಕೇವಲ 6 ರನ್ಗಳಿಂದ ಶತಕ ವಂಚಿತರಾದರು. ಆದಾಗ್ಯೂ, ಅವರು ಅಂತರರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.

ರಿಚಾ ಘೋಷ್ ದಾಖಲೆ
ಈ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ರಿಚಾ ಘೋಷ್ 77 ಎಸೆತಗಳನ್ನು ಎದುರಿಸಿ 11 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದಂತೆ 94 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. 122.07 ರ ಅವರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ 22 ವರ್ಷದ ರಿಚಅ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದರು. ಮಹಿಳಾ ಏಕದಿನ ಪಂದ್ಯಗಳಲ್ಲಿ 1,000 ರನ್‌ಗಳನ್ನು ಪೂರ್ಣಗೊಳಿಸಿದ ರಿಚಾ, ಎಂಟನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು, ಕ್ಲೋಯ್ ಟ್ರಯಾನ್ ಈ ವರ್ಷದ ಆರಂಭದಲ್ಲಿ ಕೊಲಂಬೊದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 74 ರನ್ ಬಾರಿಸಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು.


Share with

Leave a Reply

Your email address will not be published. Required fields are marked *