ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ

Share with

ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 518 ರನ್ ಪೇರಿಸಿ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್ಗೆ 58 ರನ್ ಪೇರಿಸಿದ ಬಳಿಕ ಕೆಎಲ್ ರಾಹುಲ್ (38) ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಶತಕದ ಜೊತೆಯಾಟವಾಡಿದರು. ಇದರ ನಡುವೆ 87 ರನ್ಗಳಿಸಿ ಸಾಯಿ ಸುದರ್ಶನ್ ಕೂಡ ವಿಕೆಟ್ ಒಪ್ಪಿಸಿದರು.

ಆದರೆ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಯಶಸ್ವಿ ಜೈಸ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ 173 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು 318 ರನ್ ಕಲೆಹಾಕಿತು.

ಇನ್ನು ದ್ವಿತೀಯ ದಿನದಾಟದ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (175) ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇದಾಗ್ಯೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ 196 ಎಸೆತಗಳಲ್ಲಿ 16 ಫೋರ್ ಹಾಗೂ 2 ಸಿಕ್ಸರ್ಗಳೊಂದಿಗೆ ಅಜೇಯ 128 ರನ್ ಬಾರಿಸಿದರು.

ಗಿಲ್ಗೆ ಉತ್ತಮ ಸಾಥ್ ನೀಡಿದ ನಿತೀಶ್ ಕುಮಾರ್ ರೆಡ್ಡಿ 43 ರನ್ ಬಾರಿಸಿದರೆ, ಧ್ರುವ್ ಜುರೆಲ್ 44 ರನ್ಗಳಿಸಿ ಔಟಾದರು. ಜುರೆಲ್ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ಡಿಕ್ಲೇರ್ ಘೋಷಿಸಿತು. ಅದರಂತೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ ಕಲೆಹಾಕಿದೆ.

ಭಾರತ ಪ್ಲೇಯಿಂಗ್ ಇಲೆವೆನ್: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ಸಾಯಿ ಸುದರ್ಶನ್ , ಶುಭ್ಮನ್ ಗಿಲ್ (ನಾಯಕ) , ಧ್ರುವ ಜುರೆಲ್ ( ವಿಕೆಟ್ ಕೀಪರ್ ) , ರವೀಂದ್ರ ಜಡೇಜಾ , ವಾಷಿಂಗ್ಟನ್ ಸುಂದರ್ , ನಿತೀಶ್ ಕುಮಾರ್ ರೆಡ್ಡಿ , ಕುಲ್ದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಸಿರಾಜ್.


Share with

Leave a Reply

Your email address will not be published. Required fields are marked *