ಉಡುಪಿ : ಎಲ್ಲರೂ ಕೂಡಿ ಬಾಳಬೇಕು ಎಂಬ ವಿಶ್ವ ಭ್ರಾತೃತ್ವದ ಸಂದೇಶ ಜಗತ್ತಿಗೆ ಗೀತೆಯ ಮೂಲಕ ನೀಡಿದ್ದು ಭಗವಾನ್ ಶ್ರೀ ಕೃಷ್ಣ. ದ್ವೇಷಕ್ಕೆ ದೇವರು ಒಲಿಯುವುದಿಲ್ಲ. ನಿಜವಾದ ಭಕ್ತಿ, ಪ್ರೀತಿಯಿಂದ ದೇವರನ್ನು ಆರಾಧಿಸಬೇಕು ಎಂದು ಬಾರಕೂರು ಆಯುರ್ ಆಶ್ರಮದ ಶ್ರೀ ಡಾ| ಸಂತೋಷ ಗುರೂಜಿ ಹೇಳಿದರು.

ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ನಿಮಿತ್ತ ರಾಜಾಂಗಣದಲ್ಲಿ ಸೋಮವಾರ ನಡೆದ ಸಂತ ಸಂದೇಶ ಕಾರ್ಯ ಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರಪಂಚದಲ್ಲಿ ಮತಧರ್ಮ ಗ್ರಂಥಗಳು ಇರಬಹುದು. ಆದರೆ ಭಕ್ತಿ, ಕರ್ಮ, ಜ್ಞಾನ ಮಾರ್ಗದಲ್ಲಿ ನಡೆಯುವಂತೆ ಸೂಚಿಸಿದ್ದು ಭಗವದ್ಗೀತೆಯೊಂದೇ. ಇದು ಗಣಿತ, ವಿಜ್ಞಾನದ ಸಮ್ಮಿಳಿತ ರೂಪ. ಲಕ್ಷ ವರ್ಷದ ಹಿಂದೆ ಭಾರತದಲ್ಲಿದ್ದ ಜ್ಞಾನ, ವಿಜ್ಞಾನ ಪರಂಪರೆಯನ್ನು ಶ್ರೀ ಕೃಷ್ಣನು ಗೀತೆಯ ಮೂಲಕ ಪುನರ್ಉಚ್ಚರಿಸಿದ್ದಾನೆ ಎಂದರು.
ಶ್ರೀ ಮಧ್ವಾಚಾರ್ಯರ ಭಾರತೀಯತೆಯ ಸಾರವನ್ನು ವಿಶ್ವಕ್ಕೆ ತಲುಪಿಸಿದವರು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು. ಮೌನ, ತಾಳ್ಮೆ, ಸಹನೆಯಿಂದಲೇ ಎಲ್ಲವನ್ನೂ ಜಯಿಸುತ್ತಿದ್ದಾರೆ. ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಬಹಳ ದೊಡ್ಡ ಸಾಧನೆ ಮಾಡುತ್ತಿದ್ದಾರೆ ಎಂದರು.
ಕುಂದಾಪುರ ಬಳಿ ವಿಮಾನ ನಿಲ್ದಾಣ ಸೂಕ್ತ
ಪ್ರಧಾನಿ ನರೇಂದ್ರ ಮೋದಿ ಯವರು ನ.28ರಂದು ಶ್ರೀ ಕೃಷ್ಣಮಠಕ್ಕೆ ಆಗಮಿಸುತ್ತಿದ್ದು, ಅವರಿಗೆ ಕರಾವಳಿಗೆ ಕೇಂದ್ರವಾಗಿ ಕುಂದಾಪುರ ತಾಲೂಕಿನ ಯಾವುದಾದರೂ ಒಂದು ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಅವಕಾಶ ಕಲ್ಪಿಸುವಂತೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಲ್ಲಿ ಸಂತೋಷ್ ಗುರೂಜಿ ಅವರು ಕೋರಿಕೆ ಇಟ್ಟರು. ಪಡುಬಿದ್ರಿ ಮಂಗಳೂರಿಗೆ ಸಮೀಪ ಇರುವುದರಿಂದ ಕುಂದಾಪುರ ತಾಲೂಕು ಸೂಕ್ತ ಆಯ್ಕೆ ಎಂದು ಅವರು ಹೇಳಿದರು.
ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿದರು. ಶ್ರೀಮಠದ ಭಕ್ತರಾದ ಕಮಲಾಕರ ರಾಮ್ ರಾವ್, ಕೃಷ್ಣರಾವ್ ಗಲಗಲಿ, ರುಕ್ಕಿಣಿ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ಅಧಿಕಾರಿ ವರ್ಗ ಉಪಸ್ಥಿತರಿದ್ದರು. ಕೆ.ವಿ. ರಮಣಾಚಾರ್ಯ ಅವರು ನಿರೂಪಿಸಿ, ವಂದಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವ ನಿಮಿತ್ತ ನ.18 ರ ಸಂಜೆ 5 ಕ್ಕೆ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸಂತ ಸಂದೇಶ ನೀಡುವರು. ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಭಾಗವಹಿಸುವರು.
ಭಗವಂತ ಸದಾ ನಮ್ಮನ್ನು ಪ್ರೇರೇಪಿಸುತ್ತಾನೆ
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹಿಸಿ, ಇನ್ನೊಬ್ಬರ ಧ್ವನಿ ಆಲಿಸುವ ಗುಣ ಇದ್ದವರು ಜೀವನದಲ್ಲಿ ಸಾಧಿಸುತ್ತಾರೆ. ಪ್ರಾಣಿ, ಪಕ್ಷಿ, ಮಗುವಿನ ಮೂಲಕ ಬೇರೆ ಬೇರೆ ಉಪಾದಿಯಲ್ಲಿ ಭಗವಂತ ನಮ್ಮನ್ನು ಪ್ರೇರೇಪಿಸುತ್ತಿರುತ್ತಾನೆ. ಹೀಗಾಗಿ ಎಲ್ಲವನ್ನೂ ಕೇಳುವ ಗುಣ ಇರಬೇಕು. ಇದರಿಂದ ಮಾತ್ರ ಸಾಧನೆಯ ಶಿಖರ ಏರಬಹುದು. ಸದಾ ಮನಸ್ಸು ತೆರೆದಿಟ್ಟುಕೊಳ್ಳುವವರು ಸಾಧಕರಾಗುತ್ತಾರೆ ಎಂದರು.




