ಸುಬ್ರಹ್ಮಣ್ಯ: ಕರಾವಳಿಗರಲ್ಲಿ ಪರಿಸರ ಜಾಗೃತಿ ಹೆಚ್ಚುತ್ತಿದ್ದು, ಹೊರಜಿಲ್ಲೆಗಳಿಂದ ಬಂದು ಇಲ್ಲಿ ತ್ಯಾಜ್ಯ ಎಸೆದು ಹೋಗುವವರನ್ನು ಪತ್ತೆಹಚ್ಚಿ ಜಾಗೃತಿ ಮೂಡಿಸುವ ಪ್ರಯತ್ನವೂ ಹೆಚ್ಚುತ್ತಿದೆ. ಅಂತಹದೇ ಒಂದು ಘಟನೆ ಸೋಮವಾರ ನಡೆದಿದೆ.ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆಹಚ್ಚಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ದಂಡ ವಿಧಿಸಿದ ಘಟನೆ ಸೋಮವಾರ ನಡೆದಿದೆ.

ಕುಕ್ಕೆಗೆ ಬಂದು ಹಿಂತಿರುಗುವ ವೇಳೆ ಪ್ರವಾಸಿಗರು ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಸೇತುವೆ ಮೇಲೆ ಕಾರನ್ನು ನಿಲ್ಲಿಸಿ ಪ್ಲಾಸ್ಟಿಕ್, ಬಟ್ಟೆ ಮತ್ತಿತರ ತ್ಯಾಜ್ಯದ ಕಟ್ಟನ್ನು ಎಸೆಯಲು ಮುಂದಾಗಿದ್ದರು. ಆಗ ಸ್ಥಳೀಯರು ಎಸೆಯದಂತೆ ತಿಳಿಸಿದರು. ಆದರೆ ಬೆಲೆ ನೀಡದ ವ್ಯಕ್ತಿ ಸ್ಥಳೀಯರ ಜತೆ ಕೆಟ್ಟದಾಗಿ ನಡೆದುಕೊಂಡಿದ್ದಲ್ಲದೆ ನದಿಗೆ ತ್ಯಾಜ್ಯ ಎಸೆದು ತೆರಳಿದರು. ಆ ದೃಶ್ಯವನ್ನು ಸೆರೆ ಹಿಡಿದ ಸ್ಥಳೀಯರು ಗ್ರಾ.ಪಂ.ಗೆ ರವಾನಿಸಿದರು.
ಗ್ರಾ.ಪಂ.ನವರು ಪೊಲೀಸರ ಸಹಕಾರದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಿ ಬೆಂಗಳೂರಿನ ಶಶಿಕಿರಣ್ ಎಂಬವರಿಗೆ 1,500 ರೂ. ದಂಡ ವಿಧಿಸಿದರು.
ಸೇತುವೆ ಮೇಲಿನಿಂದ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದ್ದು, ತ್ಯಾಜ್ಯ ಎಸೆದ ಹಲವರನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಜಾಗೃತಿ ಮೂಡಿಸಲಾಗಿದೆ. ಸೇತುವೆ ಬಳಿಯಲ್ಲೂ ಬಾಟಲಿ ಬೂತ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಕ್ಷೇತ್ರದ ಪರಿಸರದ ಶುಚಿತ್ವ ಕಾಪಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.




