ಮೀರತ್, ನವೆಂಬರ್ 20: ಉತ್ತರ ಪ್ರದೇಶದ (Uttar Pradesh) ಮೀರತ್ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಹಣೆಯಲ್ಲಿ ಗಾಯವಾಗಿದ್ದ ಮಗುವಿನ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ಆ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರ ತನಿಖೆ ನಡೆಯುತ್ತಿದೆ.
ಸರ್ದಾರ್ ಜಸ್ಪಿಂದರ್ ಸಿಂಗ್ ಎಂಬುವವರ ಮಗ ಮನೆಯಲ್ಲಿ ಆಟವಾಡುತ್ತಿದ್ದಾಗ ತಲೆ ಮೇಜಿನ ತುದಿಗೆ ಬಡಿದು ರಕ್ತ ಸೋರುತ್ತಿತ್ತು. ಹೀಗಾಗಿ, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಗ ಖಾಸಗಿ ಆಸ್ಪತ್ರೆಯ ವೈದ್ಯರು 5 ರೂ. ಬೆಲೆಯ ಫೆವಿಕ್ವಿಕ್ ಟ್ಯೂಬ್ ಖರೀದಿಸಿ ತಂದು ಆ ಗಾಯವನ್ನು ಮುಚ್ಚಿದ್ದಾರೆ ಎಂದು ಹೇಳಲಾಗಿದೆ. ಆದರೆ, ಆ ಮಗು ಅಳುತ್ತಲೇ ಇತ್ತು. ಆಗ ವೈದ್ಯರು ಸ್ವಲ್ಪ ಹೊತ್ತಿನಲ್ಲೇ ನೋವು ಕಡಿಮೆಯಾಗುತ್ತದೆ ಎಂದು ಹೇಳಿದರು ಎಂದು ಮಗುವಿನ ತಾಯಿ ಹೇಳಿದ್ದಾರೆ.
ಆದರೆ, ಮನೆಗೆ ಬಂದರೂ ಮಗು ಅಳು ನಿಲ್ಲಿಸಲಿಲ್ಲ. ರಾತ್ರಿಯಿಡೀ ಮಲಗದೆ ಒದ್ದಾಡುತ್ತಿತ್ತು. ಕೊನೆಗೆ ಆ ಮಗುವಿನ ತಂದೆ-ತಾಯಿ ಮರುದಿನ ಬೆಳಿಗ್ಗೆ ಆ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಗಾಯದ ರಕ್ತಕ್ಕೆ ಅಂಟಿ ಗಟ್ಟಿಯಾಗಿದ್ದ ಗಮ್ ತೆಗೆಯಲು ಅಲ್ಲಿನ ವೈದ್ಯರು 3 ಗಂಟೆ ತೆಗೆದುಕೊಂಡರು. ಕೊನೆಗೆ ಗಾಯವಾದ ಜಾಗವನ್ನು ಸ್ವಚ್ಛಗೊಳಿಸಿ, ಆ ಗಾಯವನ್ನು ಮುಚ್ಚಲು ಅವರು 4 ಹೊಲಿಗೆಗಳನ್ನು ಹಾಕಿದರು.
ಒಂದುವೇಳೆ ಮಗುವನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಆಗ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತಿತ್ತು ಎಂದು ಕುಟುಂಬಸ್ಥರು ದೂರಿನಲ್ಲಿ ಆರೋಪಿಸಿದ್ದಾರೆ. ಒಂದುವೇಳೆ ಹಣೆಗೆ ಅಂಟಿಸಿದ್ದ ಫೆವಿಕ್ವಿಕ್ ಮಗುವಿನ ಕಣ್ಣಿಗೆ ಸೋರಿಕೆಯಾಗಿದ್ದರೆ, ಮಗುವಿನ ಕಣ್ಣೇ ಹೋಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಮಗುವಿನ ಕುಟುಂಬ ದೂರು ದಾಖಲಿಸಿದೆ. ತನಿಖಾ ಸಮಿತಿಯನ್ನು ರಚಿಸಲಾಗಿದೆ. ಮಗುವಿನ ಕುಟುಂಬ ಈ ವಿಷಯವನ್ನು ಮುಖ್ಯಮಂತ್ರಿ ಕಚೇರಿಗೆ ಸಹ ತಿಳಿಸಿದೆ.





