ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಪ್ರಕರಣ, ಕೊಲೆಯತ್ನ ಸಹಿತ 22 ರಷ್ಟು ಪ್ರಕರಣಗಳ ಆರೋಪಿಯಾಗಿರುವ ಕೂಡ್ಲು ಪಾರೆಕಟ್ಟೆ ಆರ್‌ಡಿನಗರದ ಅಜಯ್ ಕುಮಾರ್ ಶೆಟ್ಟಿ ಯಾನೆ ತೇಜು(29)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.

ನ.23 ರಂದು ರಾತ್ರಿ 10 ಗಂಟೆಗೆ ರಾ.ಹೆದ್ದಾರಿ ಕರುವಚ್ಚೇರಿ ಲೋಕೋಪಯೋಗಿ ಕಚೇರಿ ಮುಂದಿನ ರಸ್ತೆಯಲ್ಲಿ ತೇಜು ಜನರಿಗೆ ಬೆದರಿಕೆಯೊಡ್ಡಿದ್ದ. ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿ ಬಂಧಿಸಿದರು. ಈ ಸಂದರ್ಭದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಸುಧೀರ್‌ಗೆ ಹಲ್ಲೆ ಮಾಡಿದ್ದಲ್ಲದೆ ಸಮವಸ್ತ್ರವನ್ನು ಹಿಡಿದೆಳೆದು ಹರಿದಿದ್ದನು. ಇದರಂತೆ ಆತನನ್ನು ಬಂಧಿಸಲಾಗಿದೆ.
ಕಾಸರಗೋಡಿನಲ್ಲಿ ಕೊಲೆ ಯತ್ನ, ಹೊಡೆದಾಟ, ಕೋಮುಗಲಭೆ ಸಹಿತ 22 ರಷ್ಟು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಗೂಂಡಾ ಪಟ್ಟಿಯಲ್ಲಿ ಪೊಲೀಸರು ಸೇರ್ಪಡೆಗೊಳಿಸಿದ್ದರು. ಬಂಧಿತ ಆರೋಪಿಯನ್ನು ಹೊಸದುರ್ಗ ಜ್ಯುಡೀಶಿಯಲ್ ಪ್ರಥಮ ದರ್ಜೆ (2) ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.




