kasaragod: ವಿದ್ಯಾರ್ಥಿನಿ ಜೊತೆ ಅಸಭ್ಯ ವರ್ತನೆ; ಬಸ್ ನಿರ್ವಾಹಕನ ವಿರುದ್ಧ ದೂರು

Share with

ಕುಂಬಳೆ: ಮಂಗಳೂರಿಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ ನಿರ್ವಾಹಕನ ವಿರುದ್ಧ ವಿದ್ಯಾರ್ಥಿನಿಯು ಪೊಲೀಸರಿಗೆ ದೂರು ನೀಡಿದ್ದಾಳೆ.

ಬಂದ್ಯೋಡಿನಿಂದ ಮಂಗಳೂರಿಗೆಂದು ವಿದ್ಯಾರ್ಥಿನಿ ಬಸ್ ಏರಿದ್ದಳು. ಟಿಕೆಟ್ ನೀಡಲು ಬಂದ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ್ದ. ವಿದ್ಯಾರ್ಥಿನಿಯ ಆತನ ವರ್ತನೆಯನ್ನು ಪ್ರಶ್ನಿಸಿದಾಗ ಆತ ಆಕೆಯನ್ನು ನಿಂದಿಸಿದ್ದಾನೆಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿದಾಗ ‘ನೀನು ಏನು ಬೇಕಾದರೂ ಮಾಡು, ನನಗೆ ಯಾವುದೇ ಸಮಸ್ಯೆಯಿಲ್ಲ’ ಎಂದು ಸವಾಲೆಸೆದಿದ್ದಾನೆಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡಾಗ ಬಸ್ ಚಾಲಕನೂ ಮಧ್ಯ ಪ್ರವೇಶಿಸಿದ್ದನು. ಬಸ್‌ ಮಂಜೇಶ್ವರಕ್ಕೆ ತಲುಪಿದಾಗ ವಿದ್ಯಾರ್ಥಿನಿಯನ್ನು ಬಲವಂತವಾಗಿ ಬಸ್‌ನಿಂದ ಇಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇಷ್ಟೆಲ್ಲಾ ಘಟನೆ ನಡೆದರೂ ಸಹ ಪ್ರಯಾಣಿಕರಾರೂ ತನ್ನ ಸಹಾಯಕ್ಕೆ ಬರಲಿಲ್ಲ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ. ಮನೆಗೆ ಮರಳಿದ ಬಳಿಕ ತಾಯಿಯೊಂದಿಗೆ ತೆರಳಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣವನ್ನು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ನಿರ್ವಾಹಕನ ವಿರುದ್ಧ ಈ ಹಿಂದೆಯೂ ಇದೇ ರೀತಿಯ ದೂರುಗಳು ಕೇಳಿ ಬಂದಿದ್ದವು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *