ಕಾಸರಗೋಡು: ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ರವಿವಾರ ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲು ಹಾಗೂ ಕಾಲ್ತುಳಿತಕ್ಕೆ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಜನ ಸಂಘಟನೆಯಾದ ‘ಫ್ರೀ’ ನೇತೃತ್ವದಲ್ಲಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ವೀಕ್ಷಣೆಗೆ ಮೂರು ಸಾವಿರ ಮಂದಿಗೆ ಪ್ರವೇಶ ಪಾಸ್ ನೀಡುವಂತೆ ಪೊಲೀಸರು ಲಿಖಿತವಾಗಿ ಮುನ್ನೆಚ್ಚರಿಕೆ ನೀಡಿದ್ದರು. ಆದರೆ ಹತ್ತು ಸಾವಿರ ಮಂದಿಗೆ ಪಾಸ್ ನೀಡಲಾಗಿತ್ತು ಎನ್ನಲಾಗಿದೆ. ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.




