ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ನಿಗದಿಗಿಂತ ಹೆಚ್ಚು ಸಮಯ ನಿಲುಗಡೆ ಮಾಡುವ ವಾಹನಗಳಿಗೆ ದಂಡ ಪ್ರಯೋಗ ಮಾಡುವ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

ಡಿ.8ರಿಂದ ಈ ನಿಯಮ ಜಾರಿಗೆ ಬರಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಧಿಕೃತ ಪಾರ್ಕಿಂಗ್ ತಡೆಯಲು ಮತ್ತು ಕಾಯುವಿಕೆಯ ಸಮಯ ಕಡಿಮೆ ಮಾಡಲು ಪ್ರತ್ಯೇಕ ಪಥ ವ್ಯವಸ್ಥೆ ಪರಿಚಯಿಸುತ್ತಿದೆ. ಇದು ಕರ್ಬ್ಸೈಡ್ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ, ಟರ್ಮಿನಲ್ಗಳ ಮುಂದೆ ಪಿಕ್-ಅಪ್ ಮಾಡುವುದನ್ನು ತಡೆಯುತ್ತದೆ.
ಹೊಸ ಪ್ರತ್ಯೇಕ ಪಥ ವ್ಯವಸ್ಥೆಯ ಪ್ರಕಾರ, ಟಿ1 ಮತ್ತು ಟಿ2 ನಲ್ಲಿ ನಿಗದಿಪಡಿಸಿದ ಆಗಮನ ಪಿಕ್-ಅಪ್ ವಲಯಕ್ಕೆ ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ ಬೋರ್ಡ್) ಪ್ರವೇಶ ಉಚಿತವಾಗಿರುತ್ತದೆ. ಆದರೆ, ನಿಗದಿತ ಸಮಯ ಮಿತಿ ಮೀರಿದರೆ ಅಂತಹ ವಾಹನಗಳ ಮೇಲೆ ಹೆಚ್ಚು ಕಾಲ ನಿಲ್ಲಿಸಿ, ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿ ದ್ದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷ ಮೀರಿದರೆ ಟೋಯಿಂಗ್: ವಿಮಾನ ನಿಲ್ದಾಣವು ಉಚಿತ ವಾಹನ ನಿಲುಗಡೆಯ ಅವಕಾಶವನ್ನು 8 ನಿಮಿಷಗಳ ಕಾಲ (ಅಂತಾರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿನದು) ನೀಡುತ್ತದೆ. ಅದನ್ನು ಮೀರಿದ ಎಲ್ಲಾ ವಾಹನ ಬಳಕೆದಾರರಿಗೆ 8-13 ನಿಮಿಷಗಳ ಕಾಲ ಉಳಿಯಲು 150 ರೂ., 13-18 ನಿಮಿಷಗಳಿಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ.
18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಟೋಯಿಂಗ್ ಮಾಡಲಾ ಗುತ್ತದೆ. ಟೋಯಿಂಗ್ ಶುಲ್ಕ ವಿಧಿಸಲಾಗುತ್ತದೆ. ಇನ್ನು ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟಿಕ್ ಕ್ಯಾಬ್ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕಾಗುತ್ತದೆ. ಸುಗಮ ಪಿಕ್ -ಅಪ್ ಅನುಭವವನ್ನು ಒದಗಿಸಲು, ಪಾರ್ಕಿಂಗ್ನ ಮೊದಲ 10 ನಿಮಿಷಗಳು ಉಚಿತವಾಗಿರುತ್ತವೆ. ಟರ್ಮಿನಲ್ 1 ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು ಪಿ4 ಮತ್ತು ಪಿ3 ಪಾರ್ಕಿಂಗ್ ವಲಯಗಳಿಗೆ ತೆರಳಬೇಕು. ಆದರೆ, ಟರ್ಮಿನಲ್ 2 ಗೆ ಸೇವೆ ಸಲ್ಲಿಸುವ ವಾಹನಗಳು ಪಿ2 ಪಾರ್ಕಿಂಗ್ ವಲಯಕ್ಕೆ ತೆರಳಬೇಕಾಗುತ್ತದೆ ಎಂದು ಬಿಐಎಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ವಿಮಾನ ನಿಲ್ದಾಣದಲ್ಲಿನ ರಸ್ತೆ ಮಾರ್ಗದಲ್ಲಿ ಸುಮಾರು 1 ಲಕ್ಷ ವಾಹನಗಳು ಪ್ರತಿದಿನ ಸಂಚರಿಸುತ್ತವೆ. ವಿಶೇಷವಾಗಿ ಟರ್ಮಿನಲ್ಗಳ ಮುಂಭಾಗ ಇರುವ ಕರ್ಬ್ಸೈಡ್ ನಲ್ಲಿ (ಡ್ರಾಪ್-ಆಫ್ ಮತ್ತು ಪಿಕ್-ಅಪ್ ಮಾರ್ಗಗಳು) ಸಂಚಾರ ದಟ್ಟಣೆ ಉಂಟಾಗುತ್ತಿದೆ.
ವಾಹನ ದಟ್ಟಣೆ ತಡೆಗೆ ಹೊಸ ನಿಯಮ
ವಿಮಾನ ನಿಲ್ದಾಣಕ್ಕೆ ಬರುವ ಖಾಸಗಿ ಕಾರುಗಳು ಮತ್ತು ಕ್ಯಾಬ್ಗಳು ಪಥಗಳಲ್ಲಿ ದೀರ್ಘಕಾಲ ಕಾಯುವಿಕೆಯಿಂದ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಇತರೆ ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗುತ್ತಿದೆ. ಕಾಲ್ನಡಿಗೆಯಿಂದ ವಿಮಾನ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಮತ್ತು ಚಾಲಕರಿಗೂ ಅನಾನುಕೂಲವಾಗುತ್ತಿದೆ. ಇದನ್ನು ಪರಿಹರಿಸಲು ಬಿಐಎಎಲ್ ಶಿಸ್ತಬದ್ಧ ನಿಯಮ ಜಾರಿಗೊಳಿಸುತ್ತಿದೆ.
ಇತ್ತೀಚೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಧಿಕೃತ ಕ್ಯಾಬ್ ಗಳು, ಆಗಮನದ ದ್ವಾರ ಹಾಗೂ ನಿರ್ಗಮನ ಯಾಂಪ್ ಹೊರಗೆ ದೀರ್ಘಕಾಲ ನಿಲುಗಡೆ ಮಾಡುವುದು ಹಾಗೂ ರಸ್ತೆಬದಿಯಲ್ಲೇ ಪಿಕ್-ಅಪ್ ಮಾಡಿಕೊಳ್ಳುತ್ತಿರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತಲೇ ಇತ್ತು. ಇದನ್ನು ತಡೆಗಟ್ಟಲು ನಿಯಮ ಉಲ್ಲಂಘನೆಗೆ ದಂಡ ವಿಧಿಸಲು ಮುಂದಾಗಿದ್ದೇವೆ – ಹರಿ ಮರಾರ್, ಸಿಇಒ, ಬಿಐಎಎಲ್




