ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭವು ಡಿ. 7 ರಂದು ನಡೆಯಲಿದ್ದು, ಡಿ.13ರಂದು ವಿಶ್ವಶಾಂತಿ ಸಮಾವೇಶ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಶನಿವಾರ (ಡಿ.06) ಬೆಳಗ್ಗೆ 6 ಗಂಟೆಯಿಂದ 18 ಕುಂಡಗಳಲ್ಲಿ 18 ಅಧ್ಯಾಯಗಳ ಯಜ್ಞದ ಪ್ರಕ್ರಿಯೆ ಗೀತಾ ಮಹಾಯಾಗ ಆರಂಭವಾಗಲಿದೆ. ಭಕ್ತರೆಲ್ಲರೂ ಭಾಗವಹಿಸಲು ಅವಕಾಶವಿದೆ. ಸಂಜೆ 6 ಗಂಟೆಯಿಂದ ಭಗವದ್ಗೀತಾ ಉತ್ಸವದ ಅಂಗವಾಗಿ ಗೀತಾಮಂದಿರದ ಸುತ್ತ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿ.7 ರಂದು ಬೆಳಗ್ಗೆ ಪುತ್ತಿಗೆ ಹಾಗು ಪಾಡಿಗಾರಿನಲ್ಲಿ ಶ್ರೀಪಾದರು ಸನಾತನ ಧರ್ಮ ಹಾಗು ವೈಧಿಕ ಪ್ರಚಾರಕ್ಕಾಗಿ ಸಂಕಲ್ಪಿಸಿದ ಗುರುಕುಲದ 31ನೇ ಘಟಿಕೋತ್ಸವ, ಅಧ್ಯಯನವನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಮಂಗಳದ ಕಾರ್ಯಕ್ರಮ ನಡೆಯಲಿದೆ ಎಂದರು.
ಡಿ.7ರಂದು ಸಂಜೆ 4 ಗಂಟೆಗೆ ಗೀತೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಇದರಲ್ಲಿ ಭಾಗಿಯಾಗಲಿದ್ದಾರೆ. ಸುಬ್ರಮಣ್ಯ ಮಠಾಧೀಶರಾದ ವಿದ್ಯಾ ಪ್ರಸನ್ನ ಶ್ರೀಪಾದರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅನೇಕ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಂದಿನಿಂದ ಶ್ರೀ ಸುಭಾಗ್ ಸ್ವಾಮಿ ಗುರುಮಹಾರಾಜ್ ಇಸ್ಕಾನ್ ಮಾಯಾಪುರಿ ಅವರಿಂದ 7 ದಿನದ ಕ್ಯಾಂಪ್ ಇರಲಿದೆ. ಡಿ.13ರಂದು ವಿಶ್ವಶಾಂತಿ ಸಮಾವೇಶ ನಡೆಯಲಿದೆ. ಅದೇ ದಿನ ಸಂಜೆ 5.45ಕ್ಕೆ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.




