ನವದೆಹಲಿ: “ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರನ್ನು ಅವಮಾನಿಸುವುದು, ವಿಚಾರಗಳನ್ನು ತಿರುಚುವುದು, ಕೀಳಾಗಿ ಕಾಣುವುದು ಮತ್ತು ಮಾನಹಾನಿ ಮಾಡುವುದು ಈಗಿನ ಆಡಳಿತ ಪಕ್ಷದ ಪ್ರಮುಖ ಉದ್ದೇಶ” ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜವಾಹರ್ ಭವನದಲ್ಲಿ ಶುಕ್ರವಾರ ನಡೆದ ನೆಹರು ಸೆಂಟರ್ ಇಂಡಿಯಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಿಯಾ, “ನೆಹರು ಅವರ ಕೊಡುಗೆಗಳ ವಿಶ್ಲೇಷಣೆ ಮತ್ತು ಟೀಕೆ ಸ್ವಾಗತಾರ್ಹವಾದರೂ, ಅವರು ಬರೆದ ಮತ್ತು ಹೇಳಿದ ವಿಷಯಗಳಲ್ಲಿ ಉದ್ದೇಶಪೂರ್ವಕವಾಗಿ ದುರುದ್ದೇಶಪೂರಿತವಾಗಿ ವರ್ತಿಸುವುದು ಸ್ವೀಕಾರಾರ್ಹವಲ್ಲ” ಎಂದು ಒತ್ತಿ ಹೇಳಿದರು.
ಅಪರೂಪದ ಸಾರ್ವಜನಿಕ ಭಾಷಣದಲ್ಲಿ ಸೋನಿಯಾ ಗಾಂಧಿಯವರು ಬಿಜೆಪಿ ಅಥವಾ ಆರೆಸ್ಸೆಸ್ ಹೆಸರು ಉಲ್ಲೇಖಿಸಲಿಲ್ಲ. ಆದರೆ ಅವರ ಹೇಳಿಕೆಗಳು ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಎನ್ನುವುದು ಸ್ಪಷ್ಟವಾಗಿತ್ತು.
“ನೆಹರು ಅವರನ್ನು ಕೆಣಕುವ ಯೋಜನೆಯೇ ಇಂದಿನ ಆಡಳಿತ ವ್ಯವಸ್ಥೆಯ ಮುಖ್ಯ ಉದ್ದೇಶ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅವರ ಗುರಿ ನೆಹರು ಅವರ ಹೆಸರನ್ನು ಅಳಿಸಿಹಾಕುವುದು ಮಾತ್ರವಲ್ಲ. ನಮ್ಮ ರಾಷ್ಟ್ರದಲ್ಲಿ ಸ್ಥಾಪನೆಯಾದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಡಿಪಾಯಗಳನ್ನು ನಾಶಮಾಡುವುದಾಗಿದೆ” ಎಂದು ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಹೇಳಿದರು.
‘ಬಾಬರಿ ಮಸೀದಿ ನಿರ್ಮಿಸಲು ನೆಹರು ಸಾರ್ವಜನಿಕ ಹಣವನ್ನು ಬಳಸಲು ಬಯಸಿದ್ದರು. ಆ ಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ತಡೆದರು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿ ವಿವಾದ ಸೃಷ್ಟಿಯಾದ ಬಳಿಕ ಸೋನಿಯಾ ಈ ಹೇಳಿಕೆ ನೀಡಿದ್ದಾರೆ.




