ಡಿಸೆಂಬರ್ ತಿಂಗಳು ಬಂದಿದೆ. ಈ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಂಡು 2026 ರ ಹೊಸ ವರ್ಷವು ಆರಂಭವಾಗಲಿದೆ. 2025ರಲ್ಲಿ ಭಾರತದ ಕೆಲವು ದೇವಾಲಯಗಳು ಭಾರೀ ಚರ್ಚೆಗೆ ಒಳಗಾಗಿತ್ತು. ಅಂತಹ ಕೆಲವು ಪ್ರಸಿದ್ದ ದೇವಾಲಯಗಳ ಮಾಹಿತಿಯನ್ನು ವರ್ಷ ಮುಗಿಯುವಷ್ಟರಲ್ಲಿ ಮತ್ತೆ ಮೆಲುಕು ಹಾಕೋಣ.
ಪ್ರಯಾಗ್ರಾಜ್ನ ಮಹಾಕುಂಭ:
ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳವು 144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದ ದೊಡ್ಡ ಆಧ್ಯಾತ್ಮಿಕ ಸಂಗಮವಾಗಿದೆ. ಇದು 2025ರ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಜರುಗಿತು, ತ್ರಿವೇಣಿ ಸಂಗಮದಲ್ಲಿ ಕೋಟಿಗಟ್ಟಲೆ ಭಕ್ತರು ಪುಣ್ಯಸ್ನಾನ ಮಾಡಿದರು. ಈ ಕುಂಭಮೇಳ ದೇಶದಲ್ಲಿ ಮಾತ್ರವಲ್ಲದೆ ಇದು ವಿಶ್ವದಾದ್ಯಂತ ಗಮನ ಸೆಳೆದಿತ್ತು.
ಪುರಿ ಜಗನ್ನಾಥ ದೇವಾಲಯ:
ಪುರಿಯ ಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ. ಈ ವರ್ಷ, ಈ ದೇವಾಲಯದಲ್ಲಿ ಒಂದು ಅದ್ಭುತ ಘಟನೆ ಸಂಭವಿಸಿದ್ದು, ಬಹಳ ಚರ್ಚೆಗೆ ಗ್ರಾಸವಾಗಿತ್ತು. ಗರುಡ ಪಕ್ಷಿಯೊಂದು ದೇವಸ್ಥಾನದ ಮೇಲಿನ ಪವಿತ್ರ ಧ್ವಜವನ್ನು ತೆಗದುಕೊಂಡು ಹೋಗಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈಘಟನೆಯನ್ನು ಕೆಲವರು ಶುಭ ಶಕುನ ವೆಂದರೆ ಇನ್ನೂ ಕೆಲವರು ಅಪಾಯದ ಮುನ್ಸೂಚನೆಯೆಂದು ಎಚ್ಚರಿಸಿದ್ದರು.
ವಿಡಿಯೋ ಇಲ್ಲಿದೆ ನೋಡಿ:

ವಾರಂಗಲ್ನ ಕಾಶಿ ವಿಶ್ವನಾಥ ದೇವಾಲಯ:
ಶ್ರೀ ಕಾಶಿ ವಿಶ್ವನಾಥ ದೇವಾಲಯವು ಭಾರತದ ಉತ್ತರ ಪ್ರದೇಶ ರಾಜ್ಯದ ಪವಿತ್ರ ನಗರವಾದ ವಾರಣಾಸಿ (ಕಾಶಿ) ಯಲ್ಲಿರುವ ಹಿಂದೂ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾದ ಈ ದೇವಾಲಯದಲ್ಲಿ ಈ ವರ್ಷ ಅಪರೂಪದ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 20 ರ ಸಂಜೆ ಶಯನ ಆರತಿಯ ನಂತರ ದೇವಾಲಯದ ಶಿಖರದ ಮೇಲೆ ಬಿಳಿ ಗೂಬೆಯೊಂದು ಕಾಣಿಸಿಕೊಂಡಿದ್ದು, ದೇವಾಲಯ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವ ಭೂಷಣ್ ಮಿಶ್ರಾ ಈ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ದೇವಾಲಯದ ಶಿಖರದ ಮೇಲೆ ಮೂರು ದಿನಗಳ ಕಾಲ ಕುಳಿತಿದ್ದ ಬಿಳಿ ಗೂಬೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಅಯೋಧ್ಯೆ ರಾಮ ಮಂದಿರ:
ಅಯೋಧ್ಯೆಯ ರಾಮ ಮಂದಿರದಲ್ಲಿ ನವೆಂಬರ್ 25 ರಂದು ಮಹತ್ವದ ಧ್ವಜಾರೋಹಣ ಸಮಾರಂಭ ನಡೆಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಸರಿ ಧ್ವಜ ಹಾರಿಸಿದರು. ರಾಮ ಮಂದಿರ ನಿರ್ಮಾಣದ ಔಪಚಾರಿಕವಾಗಿ ಪೂರ್ಣಗೊಂಡಿದ್ದರ ಸಂಕೇತವಾಗಿ ಈ ಧ್ವಜಾರೋಹಣ ಮಾಡಲಾಯಿತು. ಆದ್ದರಿಂದಲೇ ಅಯೋಧ್ಯೆ ರಾಮ ಮಂದಿರವು ಕೂಡ 2025ರಲ್ಲಿ ಭಾರೀ ಚರ್ಚೆಯಲ್ಲಿದ್ದ ದೇವಾಲಯವೆಂದರೆ ತಪ್ಪಾಗಲಾರದು.
ಉಜ್ಜಯಿನಿಯ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಾಲಯ:
ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವು ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿದೆ, ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಶಿವನ ಪವಿತ್ರ ನಿವಾಸವೆಂದು ಪರಿಗಣಿಸಲಾಗಿದೆ. ಈ ವರ್ಷ ಈ ದೇವಾಲಯದಲ್ಲಿ ಮೇ 05ರಂದು ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆತಂಕ ಮನೆ ಮಾಡಿತ್ತು. ಈ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.




