ಇ–ಸಂಜೀವಿನಿ ಟೆಲಿ ಮೆಡಿಸಿನ್ ಸೇವೆಗೆ ಉತ್ತಮ ಪ್ರತಿಕ್ರಿಯೆ

Share with

ಮಂಗಳೂರು: ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಮುಖತಃ ಭೇಟಿ ರಹಿತ ಆರೋಗ್ಯ ಸವಲತ್ತು ಒದಗಿಸಲು ಕೇಂದ್ರ ಸರಕಾರ ಆರಂಭಿಸಿದ ಇ-ಸಂಜೀವಿನಿ ಟೆಲಿ ಮೆಡಿಸಿನ್ ಸೇವೆಗೆ ಕರಾವಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ವರ್ಷಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ರೋಗಿಗಳು ಈ ಸೇವೆಯ ಪ್ರಯೋಜನ ಪಡೆದಿದ್ದಾರೆ.

ದ.ಕ., ಉಡುಪಿ ಜಿಲ್ಲೆಯ 3.5 ಲಕ್ಷಕ್ಕೂ ಅಧಿಕ ರೋಗಿಗಳು ಇದರಡಿ ಆರೋಗ್ಯ ಸಲಹೆ ಪಡೆದಿದ್ದು, 27,756 ಮಂದಿ ರೋಗಿಗಳಿಗೆ ಕರಾವಳಿಯ ವೈದ್ಯರು ಸಮಾಲೋಚನೆಯ ಸೇವೆ ನೀಡಿದ್ದಾರೆ.

ಜ್ವರ, ಮಧುಮೇಹ, ರಕ್ತದೊತ್ತಡ, ಶೀತ, ಕಣ್ಣಿನ ಸಮಸ್ಯೆ, ಸಂಧಿ ನೋವು ಸಹಿತ ವಿವಿಧ ರೋಗಗಳಿಗೆ ಇದರಡಿ ಸಮಾಲೋಚನೆ ಲಭ್ಯ. ಆದರೆ ಸದ್ಯಕ್ಕೆ ದಂತ ಚಿಕಿತ್ಸೆ ಮತ್ತು ಆಯುಷ್‌ ಸಮಾಲೋಚನೆ ಲಭ್ಯವಿಲ್ಲ. ಕೋವಿಡ್ ಸಮಯದಲ್ಲಿ ಆರೋಗ್ಯ ಸಮಸ್ಯೆ ಇದ್ದವರು ಆಸ್ಪತ್ರೆಗೆ ಬರಲು ಅಸಾಧ್ಯವಾದ ಸಂದರ್ಭದಲ್ಲಿ ಅವರಿಗೆ ವೈದ್ಯರ ಸಲಹೆ ಲಭ್ಯವಾಗಲೆಂದು ಇ-ಸಂಜೀವಿನಿ ಟೆಲಿಮೆಡಿಸಿನ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಈ ಸೇವೆಯನ್ನು ಇಂದಿಗೂ ಮುಂದುವರಿಸಲಾಗಿದೆ.

ಹಳ್ಳಿಗರಿಗೆ ಅನುಕೂಲ: ಜನರಿಗೆ ಅವರಿರುವ ಸ್ಥಳದಲ್ಲೇ ಆರೋಗ್ಯ ಸೇವೆ ಒದಗಿಸಲು ಈ ವ್ಯವಸ್ಥೆ ಆರಂಭವಾಗಿತ್ತು. ಗ್ರಾಮೀಣ ಪ್ರದೇಶದ ಮಂದಿ ವಿವಿಧ ಕ್ಷೇತ್ರಗಳಲ್ಲಿ ಪರಿಣತ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲು ನಗರ ಅಥವಾ ಪಟ್ಟಣಕ್ಕೆ ಹೋಗಬೇಕು. ಬದಲಾಗಿ ಆ್ಯಪ್ ಗಳಲ್ಲಿ ಯಾರೂ ಮನೆಯಲ್ಲೇ ಕುಳಿತು ಕರೆ ಮಾಡಿ ತಜ್ಞ ವೈದ್ಯರನ್ನು ಸಂಪರ್ಕಿಸಬಹುದು.

ಕಾರ್ಯ ಹೇಗೆ?

ಸಾರ್ವಜನಿಕರು ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ನಿಂದ ಇ-ಸಂಜೀವಿನಿ ಆ್ಯಪ್ ಡೌನ್‌ಲೋಡ್ ಮಾಡಿ ನೋಂದಣಿ ಮಾಡಬೇಕು, ಬಳಿಕ ಯಾವ ರೀತಿಯ ರೋಗಕ್ಕೆ ಸಮಾಲೋಚನೆ ಬೇಕು ಎಂಬುದರ ಸಹಿತ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಸಂಬಂಧಪಟ್ಟ ವಿಭಾಗದ ವೈದ್ಯರನ್ನು ಜನರೇ ಆರಿಸಬಹುದು. ಬಳಿಕ ಟೋಕನ್ ಬಂದು ರೋಗಿಗಳು ಸರದಿ ವ್ಯವಸ್ಥೆಯಲ್ಲಿರುತ್ತಾರೆ. ತಮ್ಮ ಸರದಿ ಬಂದಾಗ ವೀಡಿಯೋ ಕರೆ ಸಂಬಂಧಿತ ವೈದ್ಯರಿಗೆ ಸಂಪರ್ಕ ಆಗುತ್ತದೆ. ವೈದ್ಯರ ಬಳಿ ರೋಗದ ಕುರಿತು ಮಾಹಿತಿ ಹಂಚಿಕೊಂಡ ಬಳಿಕ ಚಿಕಿತ್ಸೆಯ, ಮಾತ್ರೆಯ ಕುರಿತ ವೈದ್ಯರ ಪ್ರಿಸ್ಕ್ರಿಪ್ಪನ್ ಮೊಬೈಲ್‌ಗೆ ಬರುತ್ತದೆ. ಈ ಮಾಹಿತಿಯನ್ನು ಹತ್ತಿರದ ಮೆಡಿಕಲ್‌ಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೋರಿಸಿ ಔಷಧ ತೆಗೆದುಕೊಳ್ಳಬಹುದು. ಇದರಲ್ಲಿ ರಾಜ್ಯದೊಳಗೆ, ನೆರೆ ರಾಜ್ಯ, ದೇಶ ಯಾವುದೇ ಮೂಲೆಯ ವೈದ್ಯರನ್ನು ಸಂಪರ್ಕಿಸಲು ಆಯ್ಕೆ ಇರುತ್ತದೆ.

ಏನಿದು ಇ-ಸಂಜೀವಿನಿ?

ಅಂತರ್ಜಾಲ ಆಧಾರಿತ ಟೆಲಿಮೆಡಿಸಿನ್ ವ್ಯವಸ್ಥೆ ಯನ್ನು ಇ-ಸಂಜೀವಿನಿ ಎಂದು ಕರೆಯಲಾಗುತ್ತದೆ. ಇ-ಸಂಜೀವಿನಿ ವ್ಯವಸ್ಥೆಯಲ್ಲಿ ಎರಡು ವಿಧಗಳಿವೆ. ಒಂದು ಇ-ಸಂಜೀವಿನಿ ಕಮ್ಯುನಿಟಿ ಹೆಲ್ತ್ (ಹೆಲ್ತ್ ಆ್ಯಂಡ್ ವೆಲೆಸ್ ಸೆಂಟರ್-ಎಚ್‌ಡಬ್ಲ್ಯುಸಿ) ಅಂದರೆ ಇಲ್ಲಿ ಅಧಿಕಾರಿಗಳು ರೋಗಿ ಗಳೊಡನೆ ವೈದ್ಯರಿಗೆ ಕರೆ ಮಾಡುತ್ತಾರೆ. ಇನ್ನೊಂದು ಇ-ಸಂಜೀವಿನಿ ಒಪಿಡಿ. ಇದರಲ್ಲಿ ರೋಗಿಯೇ ವೈದ್ಯರಿಗೆ ಕರೆ ಮಾಡಬಹುದು. ಉಚಿತ ಬ್ರೌಸರ್ ಆಧಾರಿತ ಆ್ಯಪ್ ಇದಾಗಿದೆ.

ಇಂಟರ್‌ನೆಟ್ ಆಧಾರಿತ ಟೆಲಿಮೆಡಿಸಿನ್ ವ್ಯವಸ್ಥೆಯಾದ ಇ-ಸಂಜೀವಿನಿ ರೋಗಿಗಳ ಮತ್ತು ವೈದ್ಯರ ಸಂಪರ್ಕ ಸೇತು ವಾಗಿ ಕಾರ್ಯನಿರ್ವಹಿಸುತ್ತಿದೆ. ರೋಗಿಗಳು ಮನೆಯಲ್ಲೇ ಕೂತು ರೋಗಗಳ ಬಗ್ಗೆ ವೈದ್ಯರ ಬಳಿ ಸಮಾಲೋಚನೆ ನಡೆಸಲು ಇ-ಸಂಜೀವಿನಿ ಸಹಕಾರಿಯಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇನ್ನಷ್ಟು ಮಂದಿ ಈ ಸೇವೆಯ ಲಾಭ ಪಡೆದುಕೊಳ್ಳಬೇಕಿದೆ. -ಡಾ| ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ


Share with

Leave a Reply

Your email address will not be published. Required fields are marked *