ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಮೋನಿಕಾ ಎಂಬಾಕೆ ಜತೆ ಪರಾರಿಯಾಗಿದ್ದ ಎಚ್ಎಸ್ಆರ್ ಲೇಔಟ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ರಾಘ ವೇಂದ್ರನನ್ನು ಅಮಾನತುಗೊಳಿಸಲಾಗಿದೆ.

ಮೈಸೂರು ಮೂಲದ ಮೋನಿಕಾ ಮಂಜುನಾಥ್ ಎಂಬುವರನ್ನು 2ನೇ ಮದುವೆಯಾಗಿದ್ದು, ದಂಪತಿಗೆ 12 ವರ್ಷದ ಮಗ ಇದ್ದಾನೆ. ಮಂಜುನಾಥ್ ಕುಟುಂಬ ಸಮೇತ ಚಂದ್ರಾಲೇಔಟ್ನಲ್ಲಿ ವಾಸವಾಗಿದ್ದಾರೆ. ಪತ್ನಿ ಮೋನಿಕಾ ಹೆಚ್ಚು ರೀಲ್ಸ್ಗಳನ್ನು ಮಾಡುತ್ತಿದ್ದರು. ಇನ್ನು ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ಟೇಬಲ್ ರಾಘವೇಂದ್ರ ಸುಮಾರು ವರ್ಷಗಳಿಂದ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಚ್ಎಸ್ಆರ್ ಲೇಔಟ್ನಲ್ಲೇ ಪತ್ನಿ ಮತ್ತು ಮಗು ಜತೆ ವಾಸವಾಗಿದ್ದಾರೆ.
ಮೋನಿಕಾಳ ರೀಲ್ಸ್ ನೋಡಿ ರಾಘವೇಂದ್ರ ಇನ್ ಸ್ಟಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಆಕೆ ಕೂಡ ರಿಕ್ವೆಸ್ಟ್ ಒಪ್ಪಿಕೊಂಡಿದ್ದಾಳೆ. ನಂತರ ಇಬ್ಬರು ಮೊಬೈಲ್ ನಂಬರ್ ಬದಲಿಸಿಕೊಂಡು ಮಾತನಾಡುತ್ತಿದ್ದರು. ಅಲ್ಲದೆ, ಇಬ್ಬರ ನಡುವೆ ಆತ್ಮೀಯತೆ ಬೆಳೆದು ಜತೆಯಾಗಿ ತಿರುಗಾಡುತ್ತಿದ್ದರು. ಇಬ್ಬರೂ ಜತೆಯಲ್ಲಿ ಹಲವು ರೀಲ್ಸ್ ಕೂಡ ಮಾಡಿದ್ದರು. ಕೆಲವೊಮ್ಮೆ ಮೋನಿಕಾಳನ್ನು ರಾಘವೇಂದ್ರ ಮಾಲ್ ಮತ್ತು ಲಾಡ್ಜ್ ಗೂ ಕರೆದೊಯ್ದಿದ್ದರು. ಎಲ್ಲೆಡೆ ಸುತ್ತಾಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಇತ್ತ ರಾಘವಂದ್ರ ಜತೆ ಪತ್ನಿ ಮೋನಿಕಾ ಪರಾರಿಯಾದ ಬಗ್ಗೆ ಪತಿ ಮಂಜುನಾಥ್ ಚಂದ್ರಾಲೇಔಟ್ ಠಾಣೆ ಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಪ್ರಮುಖವಾಗಿ ಪತ್ನಿ ಮೋನಿಕಾ ಕಳೆದ ಆಗಸ್ಟ್ 30ರಂದು ರಾಘವೇಂದ್ರನ ಜತೆ ಪರಾರಿಯಾಗಿದ್ದಾಳೆ. ಹೋಗುವಾಗ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದಾಳೆ. ಅಲ್ಲದೆ, ಪತ್ನಿ ಮೋನಿಕಾ ಜತೆ ಹೋಗಿದ್ದ ಪುತ್ರನಿಗೂ ರಾಘವೇಂದ್ರ ಜೀವ ಬೆದರಿಕೆ ಹಾಕಿದ್ದಾನೆ.
ಹೀಗಾಗಿ ಇಬ್ಬರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮಂಜುನಾಥ್ ದೂರಿನಲ್ಲಿ ಕೋರಿದ್ದರು. ಈ ಸಂಬಂಧ ಆಕೆಯನ್ನು ವಿಚಾರಣೆ ನಡೆಸಲಾಗಿದೆ. ಪತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಪ್ರತಿಯೊಂದಕ್ಕೂ ನಿಂದಿಸುತ್ತಾರೆ. ಹೀಗಾಗಿ ರಾಘವೇಂದ್ರ ಜತೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಇನ್ನು ರಾಘವೇಂದ್ರನ ಹೇಳಿಕೆ ಕೂಡ ಪಡೆಯಲಾಗಿದ್ದು, ಆಕೆಯ ರೀಲ್ಸ್ ನೋಡಿ ಆಕರ್ಷಿತನಾಗಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




