ಹಿಟ್ ಸಿನೆಮಾ ನೀಡಿದ ಯುವ ನಿರ್ದೇಶಕ ವಿಧಿವಶ

Share with

ಹೈದರಾಬಾದ್: ಟಾಲಿವುಡ್ ಚಿತ್ರರಂಗದ ಯುವ ನಿರ್ದೇಶಕರೊಬ್ಬರು ನಿಧನ ಹೊಂದಿದ್ದಾರೆ. ಅವರ ನಿಧನ ಸುದ್ದಿಯನ್ನು ಕೇಳಿ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.

ಕಿರಣ್ ಕುಮಾರ್ ಬುಧವಾರ (ಡಿ.17) ರಂದು ನಿಧನ ಹೊಂದಿದ್ದಾರೆ. ಕಳೆದ ಕೆಲ ದಿನಗಳಿಂದ ಕಿರಣ್ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.

ಅವರ ನಿಧನ ಸುದ್ದಿಯನ್ನು ಅವರ ಮುಂಬರುವ ಚಿತ್ರ ತಂಡ ಅಧಿಕೃತವಾಗಿ ಹಂಚಿಕೊಂಡಿದೆ.

2010ರಲ್ಲಿ ನಾಗಾರ್ಜುನ್ ಅವರಿಗೆ ‘ಕೇಡಿ’ ಎನ್ನುವ ಸಿನಿಮಾವನ್ನು ಕಿರಣ್ ಕುಮಾರ್ ಮಾಡಿದ್ದರು. ಇದು ಅವರ ಚೊಚ್ಚಲ ಸಿನಿಮಾವಾಗಿತ್ತು. ಈ ಚಿತ್ರ ಟಾಲಿವುಡ್‌ನಲ್ಲಿ ಹಿಟ್ ಲಿಸ್ಟ್‌ಗೆ ಸೇರಿತ್ತು.

ನಿರ್ದೇಶಕನಾಗುವ ಮುನ್ನ ಕಿರಣ್ ಕಿರಣ್ ಕುಮಾರ್ ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.

ನಿರ್ದೇಶಕ ಮಾತ್ರವಲ್ಲದೆ ಅವರು ನಟನಾಗಿಯೂ ಗುರುತಿಸಿಕೊಂಡಿದ್ದರು. ವಿಜಯ್ ಆಂಟೋನಿ ಅವರ ‘ಭದ್ರಕಾಳಿ’ ಚಿತ್ರದಲ್ಲಿ ಅವರು ‘ಸಿಬಿಐ ಅಧಿಕಾರಿ’ಯ ಪಾತ್ರವನ್ನು ಮಾಡಿದ್ದರು.

ಲಾಂಗ್ ಗ್ಯಾಪ್ ಬಳಿಕ ಕಿರಣ್ ನಿರ್ದೇಶನಕ್ಕೆ ಕಂಬ್ಯಾಕ್ ಮಾಡಲು ಸಿದ್ದರಾಗಿದ್ದರು. ‘KJQ: ಕಿಂಗ್ ಜಾಕಿ ಕ್ಲೀನ್’ ಎನ್ನುವ ಸಿನಿಮಾವನ್ನು ಕಿರಣ್ ನಿರ್ದೇಶನ ಮಾಡುತ್ತಿದ್ದರು. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಮುಕ್ತಾಯ ಕಂಡಿತ್ತು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರತಂಡ ಇತ್ತು.

ಆದರೆ ನಿರ್ದೇಶಕ ಕಿರಣ್ ಅವರ ಅಕಾಲಿಕ ನಿಧನ ಚಿತ್ರತಂಡದ ಜತೆಗೆ ಟಾಲಿವುಡ್‌ಗೆ ದೊಡ್ಡ ಶಾಕ್ ನೀಡಿದೆ.

‘KJQ: ಕಿಂಗ್ ಜಾಕಿ ಕ್ಲೀನ್’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಕೂಡ ಇತ್ತೀಚೆಗೆ ರಿಲೀಸ್ ಆಗಿತ್ತು.


Share with

Leave a Reply

Your email address will not be published. Required fields are marked *