ಮಲ್ಪೆ/ಸುರತ್ಕಲ್: ಕ್ರಿಸ್ಮಸ್ ಮತ್ತು ಹೊಸ ವರ್ಷದ ರಜೆ ಸಮೀಪಿಸುತ್ತಿರುವಂತೆ ಕಡಲತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊರಗಿನ ಪ್ರದೇಶದಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.

ರವಿವಾರ ಮಲ್ಪೆ ಬಂದರಿನಲ್ಲಿ ಭಾರೀ ಜನದಟ್ಟಣೆ ಇತ್ತು. ಮರವಂತೆ, ತ್ರಾಸಿ, ಕಾಪು, ಪಣಂಬೂರು ಬೀಚ್ಗೆ ಕೂಡ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು. ತಣ್ಣೀರುಬಾವಿ ಬೀಚ್ ನಲ್ಲಿ ಕರಾವಳಿ ಉತ್ಸವ ನಿಮಿತ್ತ ಕಾರ್ಯ ಕ್ರಮ ಇದ್ದುದರಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ವಾರಾಂತ್ಯದ ಜತೆ ಹಲವು ಮಂದಿ ವರ್ಷಾಂತ್ಯದ ಹಿನ್ನೆಲೆಯಲ್ಲಿ ರಜೆಯ ಮೂಡ್ನಲ್ಲಿದ್ದು ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವು ಶಾಲೆಗಳಿಗೆ ಕ್ರಿಸ್ಮಸ್ ರಜೆಯೂ ಆರಂಭ ವಾಗಿರುವುದರಿಂದ ಮನೆ ಮಂದಿ ಜತೆಯಾಗಿ ಭೇಟಿ ನೀಡುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರಗಳಿಗೂ ಭಕ್ತರು
ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇಗುಲ, ಉಡುಪಿಶ್ರೀಕೃಷ್ಣ ಮಠ ಹಾಗೂ ನೆರೆಯ ಜಿಲ್ಲೆಗಳ ದೇವಸ್ಥಾನಗಳಿಗೆ ಬರುವ ಪ್ರವಾಸಿಗರು ತಮ್ಮಊರಿಗೆ ಮರಳುವ ಮುನ್ನ ಬೀಚ್ಗಳಿಗೆ ಭೇಟಿ ನೀಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದುದರಿಂದ ಸಂಜೆಯವರೆಗೆ ದೇಗುಲಗಳಲ್ಲಿ ಅನಂತರ ಬೀಚ್ಗಳಲ್ಲಿ ಜನಸಂದಣಿಯಾಗುವುದು ಸಾಮಾನ್ಯ ಎಂಬಂತಾಗಿದೆ.
ಸುರಕ್ಷೆಗೆ ಆಗ್ರಹ
ರಾಜ್ಯದ ಬೀಚ್ಗಳಲ್ಲಿ ಉಂಟಾಗುತ್ತಿರುವ ಅವಘಡಗಳಿಂದಾಗ ಬೀಚ್ಗಳಲ್ಲಿ ಪ್ರವಾಸಿಗರ ಸುರಕ್ಷೆಯ ಬಗ್ಗೆ ಜಿಲ್ಲಾಡಳಿತವು ಇನ್ನಷ್ಟು ಆದ್ಯತೆ ನೀಡಬೇಕೆಂಬ ಆಗ್ರಹಗಳು ವ್ಯಕ್ತವಾಗಿದೆ. ಹೆಚ್ಚಿನ ಪ್ರವಾಸಿಗರಿಗೆ ಕಡಲಿನ ಆಳ, ಉಬ್ಬರ, ಇಳಿತಗಳ ಬಗ್ಗೆ ತಿಳಿದಿರುವುದಿಲ್ಲ. ಜೀವರಕ್ಷಕರು ಸೀಮಿತ ಪ್ರದೇಶಗಳಲ್ಲಿ ಕೆಲವೇ ಕೆಲವರು ಮಾತ್ರ ಇರುವುದರಿಂದ ಎಲ್ಲೆಡೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತಿದೆ. ಭಾರೀ ಜನದಟ್ಟಣೆ ಇರುವಾಗ ಅವರ ಮೇಲೆ ಕಣ್ಣಿಡಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.
ಸೂಚನ ಫಲಕಗಳು ಲೆಕ್ಕಕ್ಕಿಲ್ಲ
ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅಪಾಯದ ಬಗ್ಗೆ ಎಚ್ಚರಿಕೆಯ ನೀಡುವ ಫಲಕಗಳನ್ನು ಮುಖ್ಯ ಬೀಚ್ನಲ್ಲಿ 6-7 ಕಡೆಗಳಲ್ಲಿ ಅಳವಡಿಸಿದೆ.
ಆದರೆಪ್ರವಾಸಿಗರು ಮಾತ್ರ ಅದನ್ನು ಗಣನೆಗೆ ತೆಗೆದುಕೊಳ್ಳದೆ ನೀರಿಗಿಳಿಯುತ್ತಿರು ವುದು ಸಾಮಾನ್ಯವಾಗಿದೆ. ಮುಖ್ಯ ಬೀಚ್ನ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಇನ್ನಷ್ಟುಫಲಕಗಳನ್ನು ಸ್ಥಾಪಿಸಬೇಕಾಗಿದೆ. ಧ್ವನಿ ವರ್ಧಕದ ಮೂಲಕ ನಿರಂತರವಾಗಿ ಪ್ರವಾಸಿಗರನ್ನು ಎಚ್ಚರಿಸುವ ಕೆಲಸವಾಗಬೇಕು. ಪ್ರವಾಸಿಗರು ಬೀಚ್ನ ಸ್ವಚ್ಛತೆಗೆ ಕೂಡ ಗಮನ ನೀಡಬೇಕಾಗಿದೆ. ಪ್ರಸ್ತುತ ಹೊರಗಿನಿಂದ ಬಂದವರು ಎಲ್ಲೆಂದರಲ್ಲಿ ಊಟ, ತಿಂಡಿಯ ಪ್ಲೇಟ್, ತಟ್ಟೆಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಬೀಚ್ನ ಸೌಂದರ್ಯ ಹಾಳಾಗುತ್ತಿದೆ ಎನ್ನುತ್ತಾರೆ ಸ್ಥಳೀಯರಾದ ಮಂಜು ಕೊಳ.
ಸ್ವಿಮ್ಮಿಂಗ್ ರೋನ್ ಮತ್ತೆ ನಿರ್ಮಿಸಿ
ಮಲ್ಪೆ ಬೀಚ್ನಲ್ಲಿ ಸುರಕ್ಷಿತ ಎಂದೆನಿಸಿದ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಸ್ವಿಮ್ಮಿಂಗ್ ರೋನ್ಗಳನ್ನು ನಿರ್ಮಿಸಬೇಕಾಗಿದೆ. ಈ ಭಾಗದಲ್ಲಿ ಅಲ್ಲಿ ಜೀವರಕ್ಷಕ ಸಿಬಂದಿ ಸದಾ ಇರುವುದರಿಂದ ಒಂದು ವೇಳೆ ಅಪಾಯ ಸಂಭವಿಸಿದರೂ ಕೂಡಲೇ ನೆರವಿಗೆ ಧಾವಿಸಿ ಬರಲು ಸಾಧ್ಯವಾಗುತ್ತದೆ. ಹಿಂದೆ ಬೀಚ್ ಅಭಿವೃದ್ಧಿ ಸಮಿತಿ ನಿರ್ವಹಣೆ ಮಾಡುತ್ತಿರುವಾಗ ಪ್ರತ್ಯೇಕವಾದ ಸ್ವಿಮ್ಮಿಂಗ್ ರೋನ್ ಸ್ಥಾಪಿಸಲಾಗಿತ್ತು ಎನ್ನುತ್ತಾರೆ ಪಾಂಡುರಂಗ ಮಲ್ಪೆ ಅವರು.
ದಿನಕ್ಕೆ 10 ಸಾವಿರ ಮಂದಿ ಭೇಟಿ
ಕಳೆದ 10 ದಿನಗಳಿಂದ ಹೊರಜಿಲ್ಲೆ, ಹೊರರಾಜ್ಯಗಳಿಂದ ಮಲ್ಪೆ ಬೀಚ್ಗೆ ಶಾಲಾ ಕಾಲೇಜಿನ ಮಕ್ಕಳು ಸೇರಿದಂತೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ. ಮಲ್ಪೆ ಸೀವಾಕ್ ಪರಿಸರದಿಂದಲೇ ಕೆಲವರು ಬೀಚ್ಗೆ ಇಳಿಯುವುದರಿಂದ ಅವರ ಮೇಲೆ ನಿಗಾ ಇರಿಸಲು ಕಷ್ಟವಾಗುತ್ತಿದೆ. ಗಾಂಧಿ ಪ್ರತಿಮೆ ಇರುವ ಮುಖ್ಯಸ್ಥಳದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತಿದೆಯಾದರೂ ದೂರದ ಪ್ರದೇಶದಲ್ಲಿ ಪ್ರವಾಸಿಗರು ನೀರಿಗೆ ಇಳಿಯುತ್ತಾರೆ. ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂಬ ಆಗ್ರಹವೂ ಇದೆ.
ಆ್ಯಂಬುಲೆನ್ಸ್, ಜೆಸ್ಕಿ ಅಗತ್ಯ
ಮಲ್ಪೆ ಬೀಚ್ಗೆ ಇದೀಗ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ತುರ್ತು ಸಂದರ್ಭಕ್ಕಾಗಿ ಬಳಸಲು ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ. ಬೀಚ್ ಪಕ್ಕ ಒಂದು ಆ್ಯಂಬುಲೆನ್ಸ್ ಸನ್ನದ್ದವಾಗಿರಿಸಿದರೆ ಯಾವುದೇ ಅವಘಡಗಳು ಸಂಭವಿಸುವ ಸಮಯದಲ್ಲಿ ಸಹಕಾರಿಯಾಗಬಹುದು. ಜತೆಗೆ ಪ್ರಥಮ ಚಿಕಿತ್ಸೆ ವ್ಯವಸ್ಥೆಯೂ ಇರಬೇಕು. ಸಮುದ್ರದಲ್ಲಿ ಅವಘಡ ಉಂಟಾದರೆ ರಕ್ಷಣೆಗೆ ಜೆಸ್ಕಿಯ ಅಗತ್ಯವಿದೆ.-ಈಶ್ವರ್ ಮಲ್ಪೆ, ಮುಳುಗು ತಜ್ಞ




