ಉಡುಪಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಸಂದರ್ಭದಲ್ಲಿ ಇಸ್ಕಾನ್ ಸಂಸ್ಥಾಪಕರಾದ ಭಕ್ತಿವೇದಾಂತ ಪ್ರಭುಪಾದರಿಗೆ ವಿಶ್ವಗುರು ಬಿರುದು ನೀಡಿ ಗೌರವಿಸಲಾಗಿತ್ತು. ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣಮಠ ಹಾಗೂ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾಸಂಸ್ಥೆ (ಇಸ್ಕಾನ್) ಆಶ್ರಯದಲ್ಲಿ ರವಿವಾರ ರಾಜಾಂಗಣದಲ್ಲಿ ನಡೆದ “ಶ್ರೀ ಕೃಷ್ಣ ಸಮರ್ಪಣೋತ್ಸವ’ ಕಾರ್ಯಕ್ರಮದಲ್ಲಿ ವಿಶ್ವಗುರು ಬಿರುದನ್ನು ಉಡುಪಿಯ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲಾಯಿತು.

ಈ ಸಂದರ್ಭ ಹರಿದ್ವಾರ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಶ್ರೀ ಕೈಲಾಸಾನಂದ ಗಿರಿ ಮಹಾರಾಜ್ ಅನುಗ್ರಹಿಸಿ, ಕುಂಡಲ ಕ್ಷೇತ್ರದಲ್ಲಿ ಅಖಾಡ ಪರಿಷತ್‌ನ ತತ್ವಾನುಸಾರ ಆಚಾರ್ಯ ಮಹಾಮಂಡಲದ ಅಂತಾರಾಷ್ಟ್ರೀಯ ಮುಖ್ಯಸ್ಥ ರವೀಂದ್ರ ಗುರೂಜಿ ನೇತೃತ್ವದಲ್ಲಿ “ವಿಶ್ವಗುರು’ ಬಿರುದು ನೀಡಲು ತೀರ್ಮಾನಿಸಲಾಯಿತು. ಭಕ್ತಿ ವೇದಾಂತದ ಪ್ರವರ್ತಕ, ಮಾರ್ಗದರ್ಶಕ ಹಾಗೂ ಸನಾತನ ಧರ್ಮದ ರಕ್ಷಕರಾದ ಶ್ರೀಲ ಪ್ರಭುಪಾದರಿಗೆ “ವಿಶ್ವಗುರು” ಬಿರುದು ಪ್ರದಾನ ಮಾಡಲು ಶ್ರೀಕೃಷ್ಣನೇ ನನಗೆ ಅನುಗ್ರಹಾವಕಾಶ ಮಾಡಿಕೊಟ್ಟಿದ್ದು ಎಂದರು.
ಶ್ರೀಲ ಪ್ರಭುಪಾದರ ವಿಗ್ರಹಕ್ಕೆ ಶ್ರೀಕೃಷ್ಣನ ಬೆಳ್ಳಿ ಕಿರೀಟ ತೊಡಿಸಿ, ಪುಷ್ಪಾರ್ಚಿಸಿ ಆಶೀರ್ವಚನ ನೀಡಿದ ಸುಗುಣೇಂದ್ರ ತೀರ್ಥ ಶ್ರೀಪಾದರು, “ಶ್ರೀಕೃಷ್ಣ ಸಮರ್ಪಣೋತ್ಸವ’ವು ಉಡುಪಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಜಗದ್ಗುರು ಕೃಷ್ಣನಿಗೆ “ವಿಶ್ವಗುರು’ ಬಿರುದು ಸಮರ್ಪಣೆ ಮಾಡಿರುವುದು ಆತನಿಗೂ ಸಂತಸ ಆಗಿರಬಹುದು. ಕಲಿಯುಗದಲ್ಲಿ ದೇವರ ಅವತಾರವಿಲ್ಲ. ಹೀಗಾಗಿ ಎಲ್ಲ ಸಾಧನೆಗೂ ಮೂಲನಾದ ಆತನು ಭಕ್ತರ ಅವತಾರದಲ್ಲಿ ಧರ್ಮ ರಕ್ಷಣೆ ಮಾಡುತ್ತಿದ್ದಾನೆ. ಅಂತಹ ಭಕ್ತರಲ್ಲಿ ಶ್ರೀ ಮಧ್ವಾಚಾರ್ಯರು, ಶ್ರೀಲ ಪ್ರಭುಪಾದರು ಪ್ರಮುಖರಾಗಿದ್ದು, “ವಿಶ್ವಗುರು’ ಬಿರುದು ಕೊಡಿಸಿದ್ದಾನೆ ಎಂದರು.
ಪುತ್ತಿಗೆ ಮಠದ ಕಿರಿಯ ಯತಿ ಸುಶೀಂದ್ರ ತೀರ್ಥ ಶ್ರೀಪಾದರು ಅನುಗ್ರಹಿಸಿದರು. ಇಸ್ಕಾನ್‌ನ ಜಯಚೈತನ್ಯದಾಸ್, ವಾಸುದೇವ ಕೇಶವ ದಾಸ್, ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.
ಇಸ್ಕಾನ್ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಚಂಚಲಾಪತಿ ದಾಸ್ ಸ್ವಾಗತಿಸಿ, ಇಸ್ಕಾನ್ ಅಕ್ಷಯಪಾತ್ರ ಫೌಂಡೇಶನ್ನ ಅಧ್ಯಕ್ಷ ಮಧು ಪಂಡಿತ್ ದಾಸ್ ಪ್ರಸ್ತಾವನೆಗೈದರು. ಡಾ| ಬಿ.ಗೋಪಾಲ ಆಚಾರ್ಯ ನಿರೂಪಿಸಿದರು.
ಪುಸ್ತಕ ಬಿಡುಗಡೆ
ಶ್ರೀಲ ಪ್ರಭುಪಾದರಿಗೆ ನೀಡಿದ್ದ “ವಿಶ್ವಗುರು” ಬಿರುದನ್ನು ಉಡುಪಿ ಕೃಷ್ಣನಿಗೆ ಸಮರ್ಪಿಸಿದ “ಶ್ರೀಕೃಷ್ಣ ಸಮರ್ಪಣೋತ್ಸವಂ’ ಫಲಕ ಅನಾವರಣಗೊಳಿಸಲಾಯಿತು. ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್ ಸಂಪಾದನೆಯ ಹಾಗೂ ಕನ್ನಡದಲ್ಲಿ ಮುದ್ರಿತ “ಶ್ರೀಲ ಪ್ರಭುಪಾದ ಚರಿತಾಮೃತಂ’ ಪುಸ್ತಕ ಬಿಡುಗಡೆ ಮಾಡಲಾಯಿತು.




