ವಿಐಪಿ ಕೋಟಾಕ್ಕೆ ಬ್ರೇಕ್, ಸೀಟು ಕನ್ಫರ್ಮ್ ಆಗಿದ್ದರೆ ಮಾತ್ರ ಪ್ರಯಾಣ!

ನವದೆಹಲಿ: ದೇಶದ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಭಾರತದ ಮೊದಲ ‘ವಂದೇ ಭಾರತ್ ಸ್ಲೀಪರ್’ ರೈಲು ಈ ತಿಂಗಳ ಅಂತ್ಯದಲ್ಲಿ ಹಳಿ ಏರಲಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಅಸ್ಸಾಂನ ಗುವಾಹಟಿ ನಡುವೆ ಈ ಐಷಾರಾಮಿ ರೈಲು ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ. 17 ರಂದು ಈ ರೈಲಿಗೆ ಚಾಲನೆ ನೀಡುವ ಸಾಧ್ಯತೆಯಿದೆ.
ವಿಐಪಿ ಸಂಸ್ಕೃತಿಗೆ ಅಂತ್ಯ, ಕನ್ಫರ್ಮ್ ಟಿಕೆಟ್ ಕಡ್ಡಾಯ
ಈ ರೈಲಿನ ವಿಶೇಷವೆಂದರೆ ಇದರಲ್ಲಿ ಯಾವುದೇ ವಿಐಪಿ (VIP) ಅಥವಾ ತುರ್ತು ಕೋಟಾ ಇರುವುದಿಲ್ಲ. ಸಾಮಾನ್ಯ ಸಾರ್ವಜನಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉನ್ನತ ರೈಲ್ವೆ ಅಧಿಕಾರಿಗಳಿಗೂ ಸಹ ಪಾಸ್ಗಳ ಮೂಲಕ ಪ್ರಯಾಣಿಸಲು ಅವಕಾಶವಿರುವುದಿಲ್ಲ.
ಅಲ್ಲದೆ, ರೈಲ್ವೆಯಲ್ಲಿ ಸಾಮಾನ್ಯವಾದ ಆರ್.ಎ.ಸಿ (RAC – Reservation Against cancellation) ವ್ಯವಸ್ಥೆ ಈ ರೈಲಿನಲ್ಲಿ ಇರುವುದಿಲ್ಲ. ಕೇವಲ ಕನ್ಫರ್ಮ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಪ್ರವೇಶವಿರಲಿದ್ದು, ಇದರಿಂದ ವೈಟಿಂಗ್ ಲಿಸ್ಟ್ ಕಿರಿಕಿರಿ ತಪ್ಪಲಿದೆ.
ಪ್ರಯಾಣಿಕರಿಗೆ ಆಯಾ ಭಾಗದ ಸಂಸ್ಕೃತಿಯನ್ನು ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ರೈಲಿನಲ್ಲಿ ಸ್ಥಳೀಯ ಭಕ್ಷ್ಯಗಳನ್ನು (Local Cuisine) ಒದಗಿಸಲಾಗುತ್ತದೆ. ಬೆಂಗಾಲಿ ಮತ್ತು ಅಸ್ಸಾಮಿ ಶೈಲಿಯ ಸ್ವಾದಿಷ್ಟ ಆಹಾರ ಪ್ರಯಾಣಿಕರ ಹಸಿವು ನೀಗಿಸಲಿದೆ. ಜೊತೆಗೆ ಸಿಬ್ಬಂದಿಗಳು ವಿಶೇಷ ಸಮವಸ್ತ್ರ ಧರಿಸಿ ಅಚ್ಚುಕಟ್ಟಾದ ಸೇವೆ ನೀಡಲಿದ್ದಾರೆ.
ರೈಲಿನ ವಿಶೇಷತೆಗಳು ಏನು?
ವಂದೇ ಭಾರತ್ ಸ್ಲೀಪರ್ ರೈಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ:
-ಬೋಗಿಗಳ ವಿವರ: ಒಟ್ಟು 16 ಎಸಿ ಬೋಗಿಗಳು. ಇದರಲ್ಲಿ 11 ‘3-AC’, 4 ‘2-AC ಮತ್ತು 1 ‘1-AC’ ಬೋಗಿಗಳಿವೆ. ಒಟ್ಟು 823 ಆಸನಗಳು ಲಭ್ಯ.
-ಸಾಮಾನ್ಯ ರೈಲುಗಳಿಗಿಂತ ಉತ್ತಮ ಗುಣಮಟ್ಟದ ಬ್ಲಾಂಕೆಟ್ ಮತ್ತು ಬೆಡ್ಶೀಟ್ಗಳನ್ನು ಒಳಗೊಂಡ ಸುಧಾರಿತ ಬೆಡ್ರೋಲ್ ಕಿಟ್ ನೀಡಲಾಗುತ್ತದೆ.
-ರೈಲುಗಳ ಡಿಕ್ಕಿ ತಪ್ಪಿಸುವ ‘ಕವಚ್’ (Kavach) ತಂತ್ರಜ್ಞಾನ, ಸಿಸಿಟಿವಿ ಕ್ಯಾಮೆರಾ ಮತ್ತು ತುರ್ತು ಸಂದರ್ಭದಲ್ಲಿ ಚಾಲಕರೊಂದಿಗೆ ಮಾತನಾಡಲು ‘ಟಾಕ್-ಬ್ಯಾಕ್’ ವ್ಯವಸ್ಥೆ ಇದೆ. ಅತ್ಯಾಧುನಿಕ ಬಯೋ-ವ್ಯಾಕ್ಯೂಮ್ ಶೌಚಾಲಯಗಳಿವೆ.




