ಸತತ 5ನೇ ಗೆಲುವು; ಪ್ಲೇಆಫ್‌ಗೆ ಎಂಟ್ರಿಕೊಟ್ಟ ಆರ್ಸಿಬಿ

Share with

ವಡೋದರಾದಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸತತ ಗೆಲುವಿನ ಮೂಲಕ ಪ್ಲೇಆಫ್‌ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಗುಜರಾತ್ ಜೈಂಟ್ಸ್ನ ತವರು ನೆಲದಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ತಂಡದಿಂದ ಹೋರಾಟದ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಗುಜರಾತ್ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆರ್ಸಿಬಿ ಸಾಂಘಿಕ ದಾಳಿಗೆ ತತ್ತರಿಸಿದ ಗುಜರಾತ್ ಬರೋಬ್ಬರಿ 61 ರನ್ಗಳಿಂದ ಸೋಲೊಪ್ಪಿಕೊಂಡಿತು.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಮತ್ತೆ ಕಳಪೆ ಆರಂಭ ಸಿಕ್ಕಿತು. ಸ್ಫೋಟಕ ಬ್ಯಾಟರ್ ಗ್ರೇಸ್ ಹ್ಯಾರಿಸ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಾರ್ಜಿಯಾ ವೋಲ್ ಕೂಡ ಒಂದೇ ಒಂದು ರನ್ಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಆರ್ಸಿಬಿ 9 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಗೌತಮಿ ತಂಡವನ್ನು 50 ರನ್ಗಳ ಗಡಿ ದಾಟಿಸಿದರು. ಕಳೆದ ಪಂದ್ಯದಲ್ಲಿ 96 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಸ್ಮೃತಿ ಈ ಪಂದ್ಯದಲ್ಲಿ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು.

ಸ್ಮೃತಿ ವಿಕೆಟ್ ಬಳಿಕ ಗೌತಮಿ ನಾಯಕ್ ಜೊತೆಯಾದ ರಿಚಾ ಘೋಷ್ ಸ್ಕೋರ್ ಬೋರ್ಡ್ ವೇಗವನ್ನು ಹೆಚ್ಚಿಸಿದರು. ಈ ಜೋಡಿ 68 ರನ್ಗಳ ಜೊತೆಯಾಟವನ್ನಾಡಿ ತಂಡವನ್ನು 100 ರನ್ಗಳ ಗಡಿ ದಾಟಿಸಿತು. ಇದೇ ವೇಳೆ ಗೌತಮಿ ನಾಯಕ್ ತಮ್ಮ ಚೊಚ್ಚಲ ಡಬ್ಲ್ಯುಪಿಎಲ್ ಅರ್ಧಶತಕವನ್ನು ಪೂರ್ಣಗೊಳಿಸುದರು. ಈ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಮೊದಲ ಅನ್ಕ್ಯಾಪ್ಡ್ ಆಟಗಾರ್ತಿ ಎಂಬ ಇತಿಹಾಸವನ್ನು ನಿರ್ಮಿಸಿದರು.

ಗೌತಮಿ ನಾಯಕ್ 73 ರನ್‌ಗಳ ಇನ್ನಿಂಗ್ಸ್‌ ಆಡಿದರೆ, ರಿಚಾ 27 ರನ್ ಬಾರಿಸಿದರು. ಆ ಬಳಿಕ ಬಂದವರೂ ಕೂಡ ಸಹಾಯಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಆರ್ಸಿಬಿ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 178 ರನ್ ಗಳಿಸಿತು. ಗುಜರಾತ್ ಪರ ಕಾಶ್ವಿ ಗೌತಮ್ ಮತ್ತು ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್ ಪಡೆದರೆ, ರೇಣುಕಾ ಸಿಂಗ್ ಮತ್ತು ಸೋಫಿ ಡಿವೈನ್ ಕೂಡ ತಲಾ ಒಂದು ವಿಕೆಟ್ ಪಡೆದರು.


Share with

Leave a Reply

Your email address will not be published. Required fields are marked *