ಬೆಂಗಳೂರು: ಬಿಲ್ಡಿಂಗ್ ಮೇಲೆ ಹಾಗೂ ಮನೆ ಮುಂದೆ ಒಣಗಿಹಾಕಿದ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಹೆಬ್ಬುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ನಿವಾಸಿ ಅಮಲ್ (23) ಬಂಧಿತ ಆರೋಪಿ.

ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಜ.19 ರಂದು ಠಾಣಾ ವ್ಯಾಪ್ತಿಯ ವಿದ್ಯಾನಗರದಲ್ಲಿ ವ್ಯಕ್ತಿಯೊಬ್ಬ ಬಿಲ್ಡಿಂಗ್ ಮೇಲೆ ಮತ್ತು ಮನೆಯ ಅಂಗಳದಲ್ಲಿ ಒಣಗಿ ಹಾಕಿದ್ದ ಮಹಿಳಾ ಒಳ ಉಡುಪುಗಳನ್ನು ಕದಿಯುವುದು, ಅವುಗಳನ್ನು ಧರಿಸಿ, ಫೋಟೋ ತೆಗೆದುಕೊಂಡು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾ ಮಹಿಳೆಯರ ಗೌರವ ಮತ್ತು ಮಾನಕ್ಕೆ ಕುಂದುಂಟು ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು.
ಈ ಮಾಹಿತಿ ಮೇರೆಗೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದ್ದಾಗ ಮಹಿಳೆಯರ ಒಳ ಉಡುಪು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಪ್ರಾಥಮಿಕ ತನಿಖೆ ವೇಳೆ ಆರೋಪಿ ಅಮಲ್, ಮಹಿಳೆಯರ ಒಳ ಉಡುಪುಗಳನ್ನು ಕದ್ದು, ಅದನ್ನು ಧರಿಸಿಕೊಂಡು ಪೋಟೋ ತೆಗೆದುಕೊಂಡಿರುವ ಹಲವಾರು ಪೋಟೊಗಳು ಆತನ ಮೊಬೈಲ್ನಲ್ಲಿ ಪತ್ತೆಯಾಗಿವೆ. ನಂತರ ಆತ ವಾಸವಿದ್ದ ಮನೆಯನ್ನು ಪರಿಶೀಲಿಸಿದಾಗ ಮನೆಯಲ್ಲಿಯೂ ಸಹ ಮಹಿಳೆಯರ ಒಳ ಉಡುಪುಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಕಂಡುಬಂದಿದೆ.
ಈ ಸಂಬಂಧ ಸುಮೋಟೋ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




