ನವದೆಹಲಿ, ಫೆಬ್ರವರಿ 10: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಇಂದು ತಮ್ಮ ವಿರುದ್ಧ ಮಾಡಲಾದ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, “ಇಂದು ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಬರೆದಿದ್ದಾರೆ.
ರಾಜಕೀಯ ಒತ್ತಡ ಅಥವಾ ಸಾರ್ವಜನಿಕ ದಾಳಿಗೆ ನಾವು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಪುನರುಚ್ಚರಿಸಿದರು. ಅವರಿಗೆ ಸ್ವಲ್ಪವೂ ಧೈರ್ಯವಿದ್ದರೆ, ಅವರ ಬಳಿ ಪುರಾವೆಗಳಿದ್ದರೆ ನ್ಯಾಯಾಲಯದ ಮುಂದೆ ಆರೋಪವನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಸಿಎಂ ಹಿಮಂತ ಬಿಸ್ವ ಶರ್ಮ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದು ಸಿವಿಲ್ ಮತ್ತು ಕ್ರಿಮಿನಲ್ ಪರಿಹಾರಗಳನ್ನು ಅನುಸರಿಸುವ ಉದ್ದೇಶವನ್ನು ಸೂಚಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಸಂಘಟಿತ ಅಪಪ್ರಚಾರ ಮತ್ತು ರಾಜಕೀಯ ನಾಟಕೀಯ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗಾಂಧಿ ಕುಟುಂಬದ ಆಜ್ಞೆಯ ಮೇರೆಗೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 4ರಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹಿಮಂತ್ ಬಿಸ್ವಾ ಅವರ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿಗಳ ಆರೋಪ ಮಾಡಿದ್ದರು. ಅವರು ವೀಡಿಯೊಗಳ ಮೂಲಕ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.




