ಬೆಂಗಳೂರು, ಫೆಬ್ರವರಿ 11: ಉದ್ಯಮಿಗೆ ಕೋಟ್ಯಾಂತರ ಮೌಲ್ಯದ ಜಮೀನು ವ್ಯವಹಾರದಲ್ಲಿ ವಂಚನೆ ನಡೆಸಿದ ಆರೋಪದಡಿ ಪೀಟರ್ ಡ್ಯಾಡಿ (Peter Daddy) ಎಂಬಾತನ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ನಿನ್ನೆ (ಫೆ.10) ದಾಳಿ (CID raid) ನಡೆಸಿದ್ದಾರೆ. ಪುಲಿಕೇಶಿನಗರದಲ್ಲಿರುವ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕಮಿಷನ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
ಕಳೆದ ವರ್ಷದ ಆಗಸ್ಟ್‌ನಲ್ಲಿ ಸುಬ್ಬರಾವ್ ಎಂಬ ಉದ್ಯಮಿಯು ಪುಲಿಕೇಶಿನಗರ ಠಾಣೆಯಲ್ಲಿ ಪೀಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ದೂರಿನಲ್ಲಿ ಹೇಳಿರುವಂತೆ, ಸುಮಾರು 300 ಎಕರೆ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿ ಖಾತೆ ಬದಲಾವಣೆ ಮಾಡಿಸಿ, ಬಳಿಕ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಪೀಟರ್ ಭರವಸೆ ನೀಡಿದ್ದರು. ಈ ಹಿನ್ನೆಲೆ ಪ್ರೊಸೆಸಿಂಗ್ ಫೀ, ಲ್ಯಾಂಡ್ ಡೀಲ್ ಹಾಗೂ ಕಮಿಷನ್ ಹೆಸರಿನಲ್ಲಿ 96 ಲಕ್ಷ 50 ಸಾವಿರ ರೂ. ಹಣವನ್ನು ಪಡೆದುಕೊಂಡಿದ್ದರೂ, ಯಾವುದೇ ಕೆಲಸ ಮಾಡಿಕೊಡದೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಾನೇ ಚೆಕ್ ಬೌನ್ಸ್ ಕೇಸ್ ಹಾಕಿದ್ದ ಪೀಟರ್!
ಇದಲ್ಲದೆ, ಕಮಿಷನ್ ಖಾತ್ರಿಗಾಗಿ ಸುಬ್ಬರಾವ್ ಅವರಿಂದ ಚೆಕ್ ಪಡೆದಿದ್ದ ಪೀಟರ್, ಬಳಿಕ ಅದೇ ಚೆಕ್ ಆಧಾರವಾಗಿ ದೂರುದಾರರ ವಿರುದ್ಧ ಸುಳ್ಳು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣದ ಗಂಭೀರತೆ ಹಿನ್ನೆಲೆ ಈ ವಿಚಾರಣೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಸಿಐಡಿ ಅಧಿಕಾರಿಗಳು ಮನೆ ಶೋಧಿಸಿ, ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.
ಪೀಟರ್ ಡ್ಯಾಡಿ ವಿರುದ್ಧ ಬೆಂಗಳೂರು ನಗರದ ಅಶೋಕನಗರ, ಹಲಸೂರು, ಬೆಳ್ಳಂದೂರು, ಜೀವನ್ ಭೀಮಾನಗರ, ಪುಲಕೇಶಿನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಸಿಐಡಿ ಆರ್ಥಿಕ ಅಪರಾಧ ದಳಕ್ಕೆ ವರ್ಗಾವಣೆ ಮಾಡಲಾಗಿದೆ.





