ಇಂದು ಪ್ರತಿಯೊಂದು ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಂತೆಯೇ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಇನ್ನೂ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಇವರ ಮಹತ್ವದ ಸಾಧನೆಗಳು, ಕೊಡುಗೆಗಳನ್ನು ಗುರುತಿಸಿ ಗೌರವಿಸಬೇಕು ಎನ್ನುವ ನಿಟ್ಟಿನಲ್ಲಿ ಫೆಬ್ರವರಿ 11 ರಂದು ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಜಾಗೃತಿ ದಿನ ಮಾತ್ರವಲ್ಲ, ವಿಜ್ಞಾನ ಕ್ಷೇತ್ರದಲ್ಲಿನ ಲಿಂಗ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಮತ್ತು ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಇರುವಂತಹ ಒಂದು ಪ್ರಮುಖ ವೇದಿಕೆಯಾಗಿದೆ. ಒಟ್ಟಾರೆಯಾಗಿ ಈ ವಿಶೇಷ ದಿನವು ಮಹಿಳೆಯರು ಮತ್ತು ಹುಡುಗಿಯರಿಗೆ ವಿಜ್ಞಾನ ಕ್ಷೇತ್ರದಲ್ಲಿ ಪೂರ್ಣ, ಸಮಾನ ಪ್ರವೇಶ ಮತ್ತು ಭಾಗವಹಿಸುವಿಕೆಯನ್ನು ಸಾಧಿಸುವತ್ತ ಗಮನಹರಿಸುತ್ತದೆ.
ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಬಾಲಕಿಯರ ದಿನದ ಇತಿಹಾಸವೇನು?
2015 ರಲ್ಲಿ ವಿಶ್ವಸಂಸ್ಥೆಯು ಫೆಬ್ರವರಿ 11 ರಂದು ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಬಾಲಕಿಯರ ವಿಶೇಷ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಲಿಂಗ ಸಮಾನತೆಯ ಗುರಿಯನ್ನು ಸಾಧಿಸಲು ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಕ್ಷೇತ್ರಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ ಈ ವಿಶೇಷ ದಿನವನ್ನು ಆಚರಿಸುವ ಮಹತ್ವದ ನಿರ್ಧಾರವನ್ನು ವಿಶ್ವಸಂಸ್ಥೆ ಕೈಗೊಂಡಿತು. ಅಂದಿನಿಂದ ಪ್ರತಿವರ್ಷ ಫೆಬ್ರವರಿ 11 ರಂದು ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಬಾಲಕಿಯರ ವಿಶೇಷ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಾ ಬರಲಾಗುತ್ತಿದೆ.
ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಬಾಲಕಿಯರ ದಿನದ ಮಹತ್ವವೇನು?

- ಇತರ ಕ್ಷೇತ್ರಗಳಿಗೆ ಹೋಲಿಸಿದರೆ ವಿಜ್ಞಾನ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.
- STEM ಕ್ಷೇತ್ರಗಳಲ್ಲಿ ಸಂಶೋಧನೆಗೆ ಮಹಿಳೆಯರು ಕಡಿಮೆ ಸಂಬಳವನ್ನು ಪಡೆಯುತ್ತಾರೆ. ಹೀಗಾಗಿ ಲಿಂಗತಾರಮತ್ಯವನ್ನು ಹೋಗಲಾಡಿಸಲು ಮತ್ತು ಮಹಿಳೆಯರು STEM ಕ್ಷೇತ್ರಗಳಲ್ಲಿ ಭಾಗಿಯಾಗುವಂತೆ ಮಾಡಲು ಈ ದಿನದಂದು ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುತ್ತದೆ.
- ಈ ದಿನದಂದು STEM ಕ್ಷೇತ್ರಗಳಲ್ಲಿ ಮಹಿಳೆಯರ ಪೂರ್ಣ ಮತ್ತು ಸಮಾನ ಪ್ರವೇಶ ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುತ್ತದೆ.
- STEM ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಮಹಿಳೆಯರಿಗೆ ಈ ದಿನ ವಿಶೇಷ ಗೌರವವನ್ನು ನೀಡಲಾಗುತ್ತದೆ.




