ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ

Share with

ಬೆಂಗಳೂರು, ಫೆ.11: ಬೆಂಗಳೂರಿನ ಟೆಕ್ಕಿಯೊಬ್ಬರು ವಿವಾಹದ ಔತಣಕೂಟಗಳಿಗೆ (Wedding Buffet) ಸಂಬಂಧಿಸಿದ ಎಐ ಆಧಾರಿತ ಆ್ಯಪ್ (AI-based app) ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದೀಗ ಈ ಟೆಕ್ಕಿಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಪಂಕಜ್ ಎಂಬ ಟೆಕ್ಕಿ, ಕೇವಲ ತಮಾಷೆಗಾಗಿ ಮದುವೆ ಸಮಾರಂಭಗಳ ಬಫೆ ವ್ಯವಸ್ಥೆಯನ್ನು ನಿರ್ವಹಿಸುವ ಎಐ ಆ್ಯಪ್ ಒಂದನ್ನು ಸಿದ್ಧಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಆ್ಯಪ್​​ ಬಗ್ಗೆ ಹಂಚಿಕೊಂಡ ನಂತರ ಪಂಕಜ್ ಅವರಿಗೆ ನೂರಾರು ದ್ವೇಷಪೂರಿತ ಸಂದೇಶಗಳು ಮತ್ತು ಕೊಲೆ ಬೆದರಿಕೆಗಳು ಬರಲಾರಂಭಿಸಿದೆ. ಈ ಎರಡು ಕಾರಣಕ್ಕೆ ಇವರಿಗೆ ಬೆದರಿಕೆ ಬಂದಿದೆ.

ಈ ಎಐ ಮಾದರಿಗಳನ್ನು (AI models) ತರಬೇತುಗೊಳಿಸಲು ಹಾಗೂ ಬಳಸಲು ಹೆಚ್ಚಿನ ವಿದ್ಯುತ್ ಮತ್ತು ನೀರಿನ ಅಗತ್ಯವಿರುತ್ತದೆ. ಇಂತಹ ಉಪಯೋಗವಿಲ್ಲದ ಆ್ಯಪ್‌ಗಳಿಗಾಗಿ ಎಐ ಬಳಸುವ ಮೂಲಕ ಪರಿಸರಕ್ಕೆ ಹಾನಿ ಮಾಡುತ್ತಿದ್ದೀರಿ ಎಂದು ಎಕ್ಸ್​​ನಲ್ಲಿ ಕಮೆಂಟ್​ ಮಾಡಿದ್ದಾರೆ. ಅಮೂಲ್ಯವಾದ ಎಐ ತಂತ್ರಜ್ಞಾನವನ್ನು ಇಂತಹ ಸಣ್ಣ ಕೆಲಸಗಳಿಗೆ ವ್ಯರ್ಥ ಮಾಡುತ್ತಿದ್ದೀರಿ ಎಂದು ಇನ್ನೂ ಕೆಲವರು ಹೇಳಿದ್ದಾರೆ. ನಾನು ಕೇವಲ ತಮಾಷೆಗಾಗಿ ಒಂದು ಆ್ಯಪ್ ಮಾಡಿದ್ದೇನೆ, ಕ್ಯಾನ್ಸರ್‌ಗೆ ಮದ್ದು ಕಂಡುಹಿಡಿಯುತ್ತಿಲ್ಲ. ಕೇವಲ ಒಂದು ಬಫೆ ಆ್ಯಪ್‌ಗಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದು ನನ್ನ ಕುಟುಂಬವನ್ನು ಗುರಿಯಾಗಿಸಿ ಕೊಲೆ ಬೆದರಿಕೆ ಹಾಕುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​;

ಈ ಪೋಸ್ಟ್​​ನ್ನು ನೋಡಿ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾನಸಿಕವಾಗಿ ಅಸ್ವಸ್ಥರಾಗಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಒಂದು ಸಣ್ಣ ಪ್ರಾಜೆಕ್ಟ್‌ಗಾಗಿ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ಕುಗ್ಗಬೇಡಿ, ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನೀವು ಇಂತಹ ಬೆದರಿಕೆ ಹಾಕುವವರನ್ನು ಮ್ಯೂಟ್ ಮಾಡಿ ಅಥವಾ ಬ್ಲಾಕ್ ಮಾಡಿ. ನಿಮ್ಮ ಕೆಲಸ ಉತ್ತಮವಾಗಿದೆ ಎಂದು ಮತ್ತೊಬ್ಬರು ಧೈರ್ಯ ತುಂಬಿದ್ದಾರೆ.

ಪರಿಸರದ ಮೇಲೆ AI ಪ್ರಭಾವ:
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಪ್ರಕಟಿಸಿದ 2025 ರ ವರದಿಯ ಪ್ರಕಾರ, ಶಕ್ತಿಯುತ ಉತ್ಪಾದಕ AI ಮಾದರಿಗಳನ್ನು ಅಭಿವೃದ್ಧಿ ಪಡಿಸಲು ವಿದ್ಯುತ್ ಬೇಡಿಕೆ ಮತ್ತು ನೀರಿನ ಬಳಕೆ ಸೇರಿದಂತೆ ಪರಿಸರದ ಅಂಶಗಳು ಬೇಕಾಗುತ್ತದೆ. ಒಂದು ದೊಡ್ಡ AI ಮಾದರಿಯ ತರಬೇತಿಯು ನೂರಾರು ಅಮೆರಿಕನ್ ಮನೆಗಳು ಒಂದು ವರ್ಷಕ್ಕೆ ಬಳಸುವಷ್ಟು ವಿದ್ಯುತ್ ಅನ್ನು ಕೇವಲ ಕೆಲವು ವಾರಗಳಲ್ಲಿ ಬಳಸಬಹುದು. ಇದು ಇಂಗಾಲದ ಹೊರಸೂಸುವಿಕೆಯನ್ನು (Carbon Footprint) ಹೆಚ್ಚಿಸುತ್ತದೆ. ಸರ್ವರ್‌ಗಳು ಬಿಸಿಯಾಗದಂತೆ ತಡೆಯಲು ಲಕ್ಷಾಂತರ ಲೀಟರ್ ಶುದ್ಧ ನೀರು ಬೇಕಾಗುತ್ತದೆ. ಆ ಸರ್ವರ್ ತಂಪಾಗಿಸಲು ಸುಮಾರು 500 ಮಿಲಿ ನೀರು ಖರ್ಚಾಗುತ್ತದೆ. ಪರಿಸರದ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯೇ, ಆದರೆ ಕಳವಳ ಪಡುವಷ್ಟು ಪರಿಸರವನ್ನು ನಾಶ ಮಾಡುವುದಿಲ್ಲ.


Share with

Leave a Reply

Your email address will not be published. Required fields are marked *