ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ರದ್ದುಗೊಳಿಸುವಂತೆ ಬಿಜೆಪಿ ಸಂಸದರ ಆಗ್ರಹ

Share with

ನವದೆಹಲಿ, ಫೆಬ್ರವರಿ 12: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ಅವರ ಸಂಸತ್ ಸದಸ್ಯತ್ವವನ್ನು  ರದ್ದುಗೊಳಿಸುವಂತೆ ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದ ಮತ್ತು ಕೇಂದ್ರ ಬಜೆಟ್ ಅನ್ನು ಟೀಕಿಸಿದ ಕಾಂಗ್ರೆಸ್ ಸಂಸದರ ಭಾಷಣದ ಒಂದು ದಿನದ ನಂತರ ಈ ಒತ್ತಾಯ ಕೇಳಿಬಂದಿದೆ. ರಾಹುಲ್ ಗಾಂಧಿ ಭೌಗೋಳಿಕ ರಾಜಕೀಯ ಸಂಘರ್ಷ, ಕೃತಕ ಬುದ್ಧಿಮತ್ತೆ ಮತ್ತು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ್ದರು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಉಲ್ಲೇಖಿಸಿದ ನಂತರ ಅವರಿಗೆ ಮಾತನಾಡಲು ಅವಕಾಶ ನೀಡದಿದ್ದಕ್ಕಾಗಿ ವಿರೋಧ ಪಕ್ಷಗಳು ದಿನಗಟ್ಟಲೆ ಪ್ರತಿಭಟನೆ ನಡೆಸಿದ ನಡುವೆಯೇ ಅವರ ಭಾಷಣ ನಡೆಯಿತು.

ಜನವರಿ 28 ರಂದು ಪ್ರಾರಂಭವಾದ ಬಜೆಟ್ ಅಧಿವೇಶನವು 65 ದಿನಗಳಲ್ಲಿ 30 ಅಧಿವೇಶನಗಳನ್ನು ಒಳಗೊಂಡಿರುತ್ತದೆ ಮತ್ತು ಏಪ್ರಿಲ್ 2 ರಂದು ಮುಕ್ತಾಯಗೊಳ್ಳಲಿದೆ. ಫೆಬ್ರವರಿ 13ರಿಂದ ಎರಡೂ ಸದನಗಳಿಗೂ ವಿರಾಮವಿರಲಿದೆ. ಮಾರ್ಚ್ 9ರಂದು ಮತ್ತೆ ಸಭೆ ಸೇರಲಾಗುತ್ತದೆ. ಇದರಿಂದಾಗಿ ಸ್ಥಾಯಿ ಸಮಿತಿಗಳು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಅವರು ಸೊರೊಸ್ ಫೌಂಡೇಶನ್, ಫೋರ್ಡ್ ಫೌಂಡೇಶನ್, USAID ಜೊತೆ ಹೇಗೆ ತೊಡಗಿಸಿಕೊಂಡಿದ್ದಾರೆ ಮತ್ತು ಥೈಲ್ಯಾಂಡ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಯುಎಸ್ ನಂತಹ ದೇಶಗಳಿಗೆ ಹೇಗೆ ಪ್ರಯಾಣಿಸುತ್ತಾರೆ ಮತ್ತು ಅವರು ಭಾರತ ವಿರೋಧಿ ಶಕ್ತಿಗಳೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ವಿವರಿಸುವ ಒಂದು ವಿವರ ಸಲ್ಲಿಸಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತ- ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಅವರು ವಿವರವಾಗಿ ಚರ್ಚಿಸಿದರು. ಒಪ್ಪಂದವು ಸಂಪೂರ್ಣವಾಗಿ ಏಕಪಕ್ಷೀಯವಾಗಿದ್ದು, ಕೇಂದ್ರ ಸರ್ಕಾರ ಭಾರತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಸರ್ಕಾರವು ‘ಭಾರತ ಮಾತೆಯನ್ನು’ ಮಾರಾಟ ಮಾಡುತ್ತಿದೆ. ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಏಕಪಕ್ಷೀಯ ಎಂದು ಕರೆದರು, ಇದು ರೈತರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿದೆ ಎಂದರು. ಅಮೆರಿಕದ ಕೃಷಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗಳಲ್ಲಿ ಪ್ರವಾಹವನ್ನುಂಟುಮಾಡುವುದರಿಂದ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *