10 ದಿನಗಳಿಂದ ಗಲ್ಫ್ – ಮಂಗಳೂರು ನಡುವಿನ ವಿಮಾನ ಸಂಚಾರ ಬಹುತೇಕ ಸ್ತಬ್ಧ..!

Share with

ಮಂಗಳೂರು: ಇಸ್ರೇಲ್-ಇರಾನ್ ಯುದ್ಧವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರದ ಮೇಲೆ ಭಾರೀ ಹೊಡೆತ ನೀಡುತ್ತಿದ್ದು, ಕಳೆದ 10 ದಿನಗಳಲ್ಲಿ ಕೇವಲ 6 ಅಂತಾ ರಾಷ್ಟ್ರೀಯ ವಿಮಾನಗಳ ನಿರ್ಗಮನ/ಆಗಮನವಾಗಿದೆ.

ಫೆ. 28ರಿಂದಲೇ ಗಲ್ಫ್ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಆರಂಭವಾಗಿತ್ತು. ಮಾ. 1ರ ಬಳಿಕ ಬಹುತೇಕ ಎಲ್ಲ ಗಲ್ಫ್ ದೇಶಗಳ ನಡುವೆ ವಿಮಾನ ಸಂಪರ್ಕ ನಿಂತು ಹೋಗಿತ್ತು.

ಗಲ್ಫ್ ಸಂಚಾರವೇ ಆಧಾರ

ಮಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವೆಂದರೆ ಅದು ಗಲ್ಫ್ ರಾಷ್ಟ್ರಗಳಿಗೆ ಮಾತ್ರ. ಉಳಿದಂತೆ ದೇಶೀಯ ಯಾನವಷ್ಟೆ. ಮಂಗಳೂರಿನಿಂದ ದುಬೈ, ದಮ್ಮಾಮ್, ಬಹ್ಮನ್, ಅಬುಧಾಬಿ, ದೋಹಾ, ಜೆದ್ದಾ, ಕುವೈಟ್, ಮಸ್ಕತ್‌ಗೆ ವಿಮಾನ ಸೇವೆ ಇದೆ. ಆದರೆ 10 ದಿನಗಳಿಂದ ಗಲ್ಫ್ – ಮಂಗಳೂರು ನಡುವಿನ ವಿಮಾನ ಸಂಚಾರ ಬಹುತೇಕ ನಿಂತು ಹೋಗಿದೆ.

ಯುದ್ಧ ಆರಂಭವಾದ ಬಳಿಕ ಮಾ. 3ರಂದು ಮಂಗಳೂರಿನಿಂದ ಮಸ್ಕತ್‌ಗೆ ಒಂದು ವಿಮಾನ ಸಂಚರಿಸಿತ್ತು. ಅದೇ ದಿನ ಮಸ್ಕತ್‌ನಿಂದ ಒಂದು ವಿಮಾನ ಮಂಗಳೂರಿಗೆ ಆಗಮಿಸಿತ್ತು. ಮಾ. 8ರಂದು ಮಂಗಳೂರಿನಿಂದ ಮಸ್ಕತ್‌ಗೆ ಒಂದು ವಿಮಾನ ತೆರಳಿದೆ, ಮಸ್ಕತ್‌ನಿಂದ ಒಂದು ವಿಮಾನ ಆಗಮಿಸಿದೆ. ಇದೇ ದಿನ ಮಂಗಳೂರಿನಿಂದ ಜೆದ್ದಾಕ್ಕೆ ಒಂದು ವಿಮಾನ ತೆರಳಿದೆ. ಜೆದ್ದಾದಿಂದ ಒಂದು ವಿಮಾನ ಮಂಗಳೂರಿಗೆ ಆಗಮಿಸಿದೆ.

ಊರಿಗೆ ಬಂದವರು ಮರಳಲು ಪರದಾಟ

ಗಲ್ಫ್ ರಾಷ್ಟ್ರಗಳಲ್ಲಿ ಬಹುತೇಕ ಕಚೇರಿಗಳ ಕೆಲಸಗಳು ಸಾಮಾನ್ಯ ದಿನಗಳಂತೆಯೇ ನಡೆಯುತ್ತಿವೆ. ಹಾಗಾಗಿ ರಜೆಯಲ್ಲಿ ಬಂದವರಿಗೆ ಕಂಪೆನಿಗಳಿಂದ ಸಂದೇಶಗಳು ಬರುತ್ತಿವೆ. ಆದರೆ ಅಲ್ಲಿಗೆ ತೆರಳುವುದು ಹೇಗೆ ಎಂಬ ಚಿಂತೆ ಅವರಿಗೆ ಕಾಡುತ್ತಿದೆ. ಬೆಂಗಳೂರು, ಕೋಯಿಕ್ಕೋಡ್‌ನಿಂದ ಗಲ್ಲೆ ವಿಮಾನ ಸಂಚಾರ ಇರುವುದರಿಂದ ಕೆಲವರು ಅಲ್ಲಿಂದ ತೆರಳುತ್ತಿದ್ದಾರೆ.


Share with

Leave a Reply

Your email address will not be published. Required fields are marked *