ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನ ಹೋಟೆಲ್‌ಗಳು ಬಂದ್?

Share with

ಬೆಂಗಳೂರು: ಬೆಂಗಳೂರಿನ ಹೋಟೆಲ್ ಗಳಿಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಬಹುತೇಕ ಸ್ಥಗಿತಗೊಂಡಿದ್ದು, ಮಂಗಳವಾರದಿಂದ ರಾಜಧಾನಿಯ ಹಲವು ಹೋಟೆಲ್ ಗಳು ಬಂದ್ ಆಗುವ ಸಾಧ್ಯತೆ ಇದೆ.

ತೈಲ ಕಂಪನಿಗಳು ಏಕಾಏಕಿ ಗ್ಯಾಸ್ ಸರಬರಾಜನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ನಾಳೆಯಿಂದ(ಮಾರ್ಚ್ 10) ಬೆಂಗಳೂರಿನ ಹೋಟೆಲ್‌ಗಳನ್ನು ಬಂದ್ ಮಾಡಲು ‘ಬೆಂಗಳೂರು ಹೋಟೆಲ್‌ಗಳ ಸಂಘ’ ನಿರ್ಧರಿಸಿದೆ.

ಇಂದು ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಹೋಟೆಲ್ ಗಳ ಸಂಘ, ತೈಲ ಕಂಪನಿಗಳ ಈ ಅನಿರೀಕ್ಷಿತ ನಿರ್ಧಾರದಿಂದ ಹೋಟೆಲ್ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿಂದೆ ಮುಂದಿನ 70 ದಿನಗಳವರೆಗೆ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ತೈಲ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಈಗ ಕೊಟ್ಟ ಮಾತಿಗೆ ತಪ್ಪಿ ದಿಢೀರನೆ ಸರಬರಾಜು ನಿಲ್ಲಿಸಿರುವುದು ಹೋಟೆಲ್ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.

ಗ್ಯಾಸ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಹೋಟೆಲ್‌ಗಳನ್ನು ಮುಚ್ಚಲು ತೀರ್ಮಾನಿಸಲಾಗಿದ್ದು, ಈ ಗಂಭೀರ ಪರಿಸ್ಥಿತಿಯ ಕುರಿತು ಚರ್ಚಿಸಲು ಸೋಮವಾರ ಸಂಜೆ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್‌ನಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *