ಕೆಲವೆಡೆ ಪೂರ್ಣ ಬಂದ್.. ಕೆಲವೆಡೆ ಆಂಶಿಕ ಬಂದ್..! ಕಟ್ಟಿಗೆ ಒಲೆಗೆ ಮೊರೆ..!

Share with

ಮಂಗಳೂರು: ಎಲ್‌ಪಿಜಿ ಅಭಾವದ ಪರಿಣಾಮ ನಿಧಾನವಾಗಿ ತಟ್ಟಲಾರಂಭಿಸಿದೆ. ನಗರದ ಕೆಲವೊಂದು ಹೊಟೇಲ್‌ಗಳು ದಿನದಲ್ಲಿ ಕೆಲವು ಹೊತ್ತು ಮುಚ್ಚುವುದಕ್ಕೆ ಮುಂದಾಗಿವೆ.

ಕಮರ್ಶಿಯಲ್‌ ಎಲ್‌ಪಿಜಿ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಗ್ಯಾಸ್ ಸಂಗ್ರಹವಿಲ್ಲದೆ, ಇರುವಷ್ಟನ್ನು ಕೆಲವು ದಿನಕ್ಕೆ ವಿಸ್ತರಿಸುವ ಉದ್ದೇಶದಿಂದ ಹಲವು ಹೋಟೆಲ್‌ಗಳು ಗುರುವಾರ ಕೆಲವು ಹೊತ್ತು ಮುಚ್ಚಿದ್ದವು. ಇಡೀ ದಿನ ಕಾರ್ಯವೆಸಗಿ ಊಟ, ತಿಂಡಿ ನೀಡುತ್ತಿದ್ದ ನಗರದ ಕಾರ್‌ಸ್ಟ್ರೀಟ್‌ನ ಹೊಟೇಲ್‌ವೊಂದು ಮಧ್ಯಾಹ್ನ 12ಕ್ಕೇ ಮುಚ್ಚಿದ್ದು, ಮಧ್ಯಾಹ್ನ ಸಿಬಂದಿ ಹೊಟೇಲ್ ಶುಚಿಗೊಳಿಸುತ್ತಿದ್ದುದು ಕಂಡು ಬಂತು.

ಮಧ್ಯಾಹ್ನದ ಊಟ ಸ್ಥಗಿತ ಗೊಳಿಸಲಾಗಿದ್ದು, ಸಂಜೆ ಮತ್ತೆ ತೆರೆಯುವುದಾಗಿ ಹೊಟೇಲ್ ಕೆಲಸಗಾರರು ತಿಳಿಸಿದರು. ನಗರದ ಹೊರವಲಯದ ಕಾವೂರಿನಲ್ಲಿ ಹೊಟೇಲ್‌ವೊಂದು ಮುಚ್ಚಿದ್ದು, ಗ್ಯಾಸ್ ಇಲ್ಲದ ಕಾರಣ ಮುಚ್ಚಿರುವುದಾಗಿ ನೊಟೀಸ್ ಕೂಡಾ ಹಾಕಲಾಗಿತ್ತು.

ಕಾಳಸಂತೆಯಲ್ಲಿ ಪೂರೈಕೆ?

ವಾಣಿಜ್ಯ ಎಲ್‌ಪಿಜಿ ಪೂರೈಕೆ ಮಾಡದಂತೆ ಸರಕಾರ ಎಚ್ಚರಿಕೆ ವಹಿಸಿದ್ದರೂ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್‌ಒದಗಿಸುತ್ತಿರುವ ಬಗ್ಗೆ ಮೂಲಗಳು ತಿಳಿಸಿವೆ.

ಹೊಟೇಲ್ ಮಾಲಕರು ಗ್ಯಾಸ್ ಇಲ್ಲದೆ ಕಂಗೆಟ್ಟಿರುವ ಹೊತ್ತಿನಲ್ಲೇ ಕಾಳಸಂತೆಯಲ್ಲಿ 3-4 ಸಾವಿರ ರೂ. ಗೆ ಸಿಲಿಂಡರ್‌ಪೂರೈಸಲಾಗುತ್ತಿದೆ. ಇನ್ನು ಎಲ್ಫ್, ಕೊಂಕಣ್‌ನಂತಹ ಖಾಸಗಿ ಪೂರೈಕೆದಾರರು ಮಿತ ಸಂಖ್ಯೆಯಲ್ಲಿ ಸಿಲಿಂಡ‌ರ್ ಒದಗಿಸುತ್ತಿದ್ದಾರೆ. ಹಾಗಾಗಿ ಹೊಟೇಲ್‌ನವರು ತುಸು ಹೆಚ್ಚು ದರ ತೆತ್ತಾದರೂ ಹೊಟೇಲ್ ನಡೆಸುವಂತಾಗಿದೆ.

ದೇವಸ್ಥಾನಗಳಲ್ಲಿ ಗ್ಯಾಸ್ ಸಂಗ್ರಹ ಮುಗಿದ ಕಾರಣ ಕಟ್ಟಿಗೆ ಒಲೆಯಿಂದ ಅಡುಗೆ ಪ್ರಾರಂಭಿಸಲಾಗಿದೆ. ಕದ್ರಿಯಲ್ಲಿ ಕಟ್ಟಿಗೆ ಒಲೆಯನ್ನೇ ಬಳಸಿ ಗುರುವಾರ ಅನ್ನ, ಸಾರು ಮಾಡಿ ಭಕ್ತರಿಗೆ ಬಡಿಸಲಾಗಿದೆ. ಕಟೀಲು, ಕುದ್ರೋಳಿ ದೇವಸ್ಥಾನಗಳಲ್ಲೂ ಇದೇ ಸ್ಥಿತಿ ಕಂಡುಬಂತು.


Share with

Leave a Reply

Your email address will not be published. Required fields are marked *