ಬೇಡಿಕೆಗೆ ತಕ್ಕಂತೆ ಅನಿಲ ಪೂರೈಕೆಗೆ ಕ್ರಮ: ಉಡುಪಿ ಜಿಲ್ಲಾಧಿಕಾರಿ

Share with

ಮಣಿಪಾಲ: ಮಧ್ಯಪ್ರಾಚ್ಯ ದಲ್ಲಿ ಯುದ್ಧ ಸನ್ನಿವೇಶದಿಂದ ಅನಿಲ ಕೊರತೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಏಕಕಾಲದಲ್ಲಿ ಅನಿಲ ಸಂಪರ್ಕಕ್ಕೆ ಬುಕ್ಕಿಂಗ್ ಮಾಡುತ್ತಿದ್ದು, ಇದರಿಂದ ಬುಕ್ಕಿಂಗ್ ಕ್ರಾಶ್ ಆಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳು, ವಸತಿ ನಿಲಯಗಳು, ಗೃಹಬಳಕೆ, ಅತೀ ಆವಶ್ಯಕ ವಸ್ತುಗಳನ್ನು ಉತ್ಪಾದಿಸುವ ಕೈಗಾರಿಕ ಘಟಕಗಳು ಸಹಿತ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಆದ್ಯತೆ ಮೇಲೆ ಅನಿಲ ಪೂರೈಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ ಗೃಹ ಮತ್ತು ವಾಣಿಜ್ಯ ಬಳಕೆಯ ಗ್ಯಾಸ್ ಬಗ್ಗೆ ಏಜೆನ್ಸಿ ಮಾಲಕರೊಂದಿಗೆ ನಡೆದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರು ವದಂತಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದ್ದು, ಆತಂಕಪಡುವ ಅಗತ್ಯ ವಿಲ್ಲ ಎಂಬುದನ್ನು ಅಧಿಕಾರಿಗಳು ಗ್ರಾಹಕರಿಗೆ ಮನದಟ್ಟು ಮಾಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಚ್ಚು ಗೃಹ ಬಳಕೆದಾರರು ಎರಡು ಅನಿಲ ಸಂಪರ್ಕ ಹೊಂದಿದ್ದು, ಏಕ ಸಿಲಿಂಡರ್‌ಹೊಂದಿದ್ದವರಿಗೆ ಆದ್ಯತೆ ಮೇಲೆ ಅನಿಲ ಪೂರೈಕೆ ಮಾಡಬೇಕು. ಆರೋಗ್ಯ, ವಾಣಿಜ್ಯ, ಕೈಗಾರಿಕೆ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಪೊಲೀಸ್ ಮೊದಲಾದ ಇಲಾಖೆಗಳ ಅಧೀನದಲ್ಲಿರುವ ಸಂಸ್ಥೆಗಳಿಗೆ ಅಗತ್ಯವಿರುವ ಅನಿಲ ಸಿಲಿಂಡರ್‌ಗಳ ಬೇಡಿಕೆಯ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು.

ಪ್ರತಿ ಗ್ರಾಹಕರಿಗೆ ಕೊನೆಯ ಮರುಪೂರಣದ 25 ದಿನಗಳವರೆಗೆ ಇಂಟರ್-ಬುಕ್ಕಿಂಗ್ ಅವಧಿ ನಿಗದಿ ಪಡಿಸಲಾಗಿದೆ. ಈ ಬಗ್ಗೆ ಆಹಾರ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಕೆಯಲ್ಲಿ ಸಮಸ್ಯೆ ಯಾಗದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಜಾಲತಾಣಗಳ ಮೂಲಕ ತಪ್ಪು ಸಂದೇಶ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಸಾರ್ವಜನಿಕರು 112ಕ್ಕೆ ಕರೆ ಮಾಡಿ ದೂರು ನೀಡಬಹುದು. ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ, ಅನಧಿಕೃತವಾಗಿ ದಾಸ್ತಾನು, ಸಾಗಾಟ, ರಿಫಿಲ್ಲಿಂಗ್ ಕಂಡುಬಂದಲ್ಲಿ ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ಯಾಸ್ ಏಜೆನ್ಸಿಯ ಮಾಲಕರು, ಪೂರೈಕೆದಾರರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *