ಪ್ರಯಾಗ್‌ರಾಜ್: 2025ರ ಪ್ರಯಾಗ್‌ರಾಜ್ ನಲ್ಲಿ ನಡೆದ ಮಹಾ ಕುಂಭಮೇಳದ ಮೂಲಕ ಬೆಳಕಿಗೆ ಬಂದಿದ್ದ ಮೋನಾಲಿಸಾ ಭೋಂಸ್ಥೆ, ಇದೀಗ ಕೇರಳದಲ್ಲಿ ತನ್ನ ಪ್ರಿಯಕರ ಫರ್ಮನ್ ಎಂಬಾತನನ್ನು ವಿವಾಹವಾಗಿರುವುದು ಸಂಚಲನ ಮೂಡಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದು, “ನನ್ನ ಮಗಳನ್ನು ಹೇಗಾದರೂ ಮಾಡಿ ಮರಳಿ ಕರೆತನ್ನಿ” ಎಂದು ತಾಯಿ ಲತಾ ಭೋಂಸ್ಥೆ ಕಣ್ಣೀರಿಡುತ್ತಿದ್ದಾರೆ.

ಮಧ್ಯಪ್ರದೇಶದ ಮಹೇಶ್ವರ ಜೈಲಿನ ಬಳಿಯಿರುವ ತಾತ್ಕಾಲಿಕ ಗುಡಿಸಲಿನಲ್ಲಿ ಮೋನಾಲಿಸಾ ಕುಟುಂಬ ವಾಸಿಸುತ್ತಿದ್ದು. ಸದ್ಯ ಅಲ್ಲಿನ ಪರಿಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಮಗಳು ಮದುವೆಯಾದ ವಿಚಾರ ಗೊತ್ತಾದ ದಿನದಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ತನ್ನ ಮಗಳ ಫೋಟೋ ಹಿಡಿದು ಎದೆಗೆ ಬಡಿದುಕೊಳ್ಳುತ್ತಾ ಅಳುತ್ತಿರುವ ತಾಯಿ, ನನ್ನ ಮಗಳನ್ನು ನನಗೆ ಮರಳಿ ಕೊಡಿ, ನನಗೆ ಬೇರೇನೂ ಬೇಡ. ಅವಳು ಹೋದರೆ ನನ್ನ ಉಳಿದ ಮಕ್ಕಳಾದ ಜೆಸ್ಸಿಕಾ, ಅಜಯ್ ಮತ್ತು ಆಶಿಶ್ ಅವರ ಗತಿಯೇನು? ಅವಳಿಲ್ಲದೆ ನಾನು ವಿಷ ಕುಡಿದು ಸಾಯುತ್ತೇನೆ,” ಎಂದು ಮಮ್ಮಲ ಮರುಗಿದ್ದಾರೆ.
ಮೋನಾಲಿಸಾ ನಟನೆಯ ತರಬೇತಿಗಾಗಿ ಕೇರಳಕ್ಕೆ ಹೋಗಿದ್ದಾಳೆ ಎಂದೇ ಕುಟುಂಬಸ್ಥರು ನಂಬಿದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಅವಳು ಫರ್ಮನ್ ಎಂಬಾತನನ್ನು ಮದುವೆಯಾಗಿರುವ ವಿಷಯ ತಿಳಿದು ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ತಾಯಿ, ನನ್ನ ಮಗಳು ತುಂಬಾ ಮುಗ್ಗೆ. ಆಕೆಗೆ ಏನೋ ನಶೆಯ ಪದಾರ್ಥ ನೀಡಿ, ದಾರಿ ತಪ್ಪಿಸಿ ಈ ಮದುವೆ ಮಾಡಿಸಲಾಗಿದೆ. ಈಗ ಆಕೆಯ ಬಳಿ ಇದ್ದ ಎರಡು ಮೊಬೈಲ್ ಫೋನ್‌ಗಳನ್ನು ಫರ್ಮನ್ ಕಸಿದುಕೊಂಡಿರಬಹುದು ಕೆಲ ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ, ಮನೆಯವರ ಜೊತೆ ಮಾತನಾಡಲು ಆಕೆಯನ್ನು ಬಿಡುತ್ತಿಲ್ಲ. ಒಮ್ಮೆಯಾದರೂ ಆಕೆಯ ಧ್ವನಿ ಕೇಳಿಸಿದರೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುತ್ತದೆ” ಎಂದು ಅಲವತ್ತುಕೊಂಡಿದ್ದಾರೆ.




