ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬುಧವಾರ (ಮಾ.18) ರಿಂದ ಆರಂಭವಾಗಲಿದ್ದು ಏಪ್ರಿಲ್ 2ರವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಒಟ್ಟು 902899 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 812855 ಹೊಸಬರು, 62845 ಪುನರಾವರ್ತಿತ ಮತ್ತು 27189 ಖಾಸಗಿ ಅಭ್ಯರ್ಥಿಗಳಿದ್ದಾರೆ.

ಪರೀಕ್ಷೆಗೆ ಒಟ್ಟು 15941 ಶಾಲೆಗಳು ನೋಂದಾಯಿಸಿಕೊಂಡಿದ್ದು, 2871 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ಪರೀಕ್ಷಾ ಕೊಠಡಿಗಳಲ್ಲೂ ಸಿಸಿ ಕ್ಯಾಮರಾ ಕಣ್ಣಾವಲು ಮತ್ತು ವೆಬ್ ಕಾಸ್ಟಿಂಗ್ ನಡೆಯಲಿದ್ದು, ಪರೀಕ್ಷಾ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್ಇಎಬಿ) ತಿಳಿಸಿದೆ.
ನಕಲಿ ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸುವುದರ ಬಗ್ಗೆ ನಿಗಾ ಇಡಲಾಗುವುದು. ಜತೆಗೆ ಇಂತಹ ಅಕ್ರಮ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಕೇಂದ್ರದ 100 ಮೀಟರ್ ವ್ಯಾಪ್ತಿಯಲ್ಲಿರುವ ಫೋಟೋಕಾಪಿ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ.




