ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರಚಾರದ ಹುಚ್ಚು ಮಿತಿಮೀರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಜನರು ಎಂತಹ ಕೆಳಮಟ್ಟದ ಸಾಹಸಕ್ಕೂ ಕೈಹಾಕುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ವೃದ್ಧರೊಬ್ಬರನ್ನು ಚೀಲದಲ್ಲಿ ಕಟ್ಟಿ ಕೊರಿಯರ್ ಮಾಡಲು ಯತ್ನಿಸಿದ ವಿಲಕ್ಷಣ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿದೆ.

ಮಂಗಳವಾರ(ಮಾ.17) ಮಧ್ಯಾಹ್ನ ವೈಯಾಲಿಕಾವಲ್ ಪ್ರದೇಶದ ಸ್ಥಳೀಯ ಕೊರಿಯರ್ ಕಚೇರಿಗೆ ಒಂದೇ ಕುಟುಂಬದ ಐವರು ಸದಸ್ಯರು ಬಂದಿದ್ದರು. ತಮ್ಮೊಂದಿಗೆ ತಂದಿದ್ದ ದೊಡ್ಡ ಚೀಲವೊಂದನ್ನು ತೋರಿಸಿ, ಇದನ್ನು ಪಾರ್ಸೆಲ್ ಮಾಡಬೇಕು ಎಂದು ಸಿಬ್ಬಂದಿಗೆ ಹೇಳಿದ್ದಾರೆ. ಆದರೆ, ಸಿಬ್ಬಂದಿ ಚೀಲವನ್ನು ಸ್ವೀಕರಿಸುವ ವೇಳೆ ಚೀಲದೊಳಗೆ ಏನಿದೆ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಕುಟುಂಬದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಇದರಿಂದ ಅನುಮಾನಗೊಂಡ ಸಿಬ್ಬಂದಿ ಚೀಲವನ್ನು ಬಿಚ್ಚಿದ್ದಾರೆ. ಚೀಲ ತೆರೆದಾಗ ಅಲ್ಲಿದ್ದವರಿಗೆ ಶಾಕ್ ಕಾದಿತ್ತು! ಅದರೊಳಗೆ ಉಸಿರುಗಟ್ಟಿ ಒದ್ದಾಡುತ್ತಿದ್ದ ವೃದ್ಧರೊಬ್ಬರು ಪತ್ತೆಯಾಗಿದ್ದಾರೆ.
ವೃದ್ಧನನ್ನು ನೋಡಿ ಕಂಗಾಲಾದ ಸಿಬ್ಬಂದಿ ಕುಟುಂಬದವರನ್ನು ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಆ ಕುಟುಂಬದ ಸದಸ್ಯರು, “ನಮಗೆ ಈ ಪಾರ್ಸೆಲ್ ಕಳುಹಿಸಲೇಬೇಕು, ಬೇಕಿದ್ದರೆ ಹೆಚ್ಚಿನ ಹಣ ನೀಡುತ್ತೇವೆ” ಎಂದು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದು ಸ್ಥಳದಲ್ಲಿ ತೀವ್ರ ಉದ್ವಿಗ್ನತೆಗೆ ಕಾರಣವಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಿಸಿದ ವೇಳೆ ಇದು ‘ಸೋಶಿಯಲ್ ಮೀಡಿಯಾ ರೀಲ್ಸ್’ ಗಾಗಿ ಮಾಡಿದ ನಾಟಕ, ಅಲ್ಲದೆ ವ್ಯಕ್ತಿ ಅಲ್ಲಿದ್ದ ಯುವತಿಯ ತಂದೆ ಎಂಬುದು ಬೆಳಕಿಗೆ ಬಂದಿದೆ.
ಈ ಕೃತ್ಯದಿಂದ ವೃದ್ಧರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು ಎಂದು ಎಚ್ಚರಿಸಿದ ಪೊಲೀಸರು, ಕುಟುಂಬದಿಂದ ಕ್ಷಮಾಪಣಾ ವಿಡಿಯೋ ರೆಕಾರ್ಡ್ ಮಾಡಿಸಿಕೊಂಡಿದ್ದಾರೆ. ಸದ್ಯಕ್ಕೆ ಎಚ್ಚರಿಕೆ ನೀಡಿ ಕಳುಹಿಸಲಾಗಿದ್ದು, ಕೊರಿಯರ್ ಸಂಸ್ಥೆ ದೂರು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




