ದ.ಕ. ಜಿಲ್ಲೆ ತಾಪಮಾನದಲ್ಲಿ ಏರಿಕೆ: ಶಾಖಾಘಾತ..; ಸರಕಾರಿ ಆಸ್ಪತ್ರೆಗಳಲ್ಲಿ ನಿಗಾ

Share with

ಮಂಗಳೂರು: ಕಳೆದ ಕೆಲವು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ತಾಪಮಾನದಲ್ಲಿ ಏರಿಕೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆ 39 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಬಿಸಿ ಗಾಳಿಯಿಂದಾಗಿ ಹೀಟ್ ಸ್ಟ್ರೋಕ್ ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಮುನ್ನೆಚ್ಚರಿಕೆಯಾಗಿ ಮಂಗಳೂರು ಸಹಿತ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆ ಮೀಸಲಿರಿಸಲಾಗಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 5 ಹಾಸಿಗೆಯುಳ್ಳ ವಾರ್ಡ್ ಅನ್ನು ಸಜ್ಜುಗೊಳಿಸಲಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಯುಳ್ಳ ಚಿಕಿತ್ಸಾ ಕೊಠಡಿ ಸನ್ನದ್ದಗೊಳಿಸಲಾಗಿದೆ. ಈ ಕೊಠಡಿಗಳಲ್ಲಿ ಔಷಧ, ಎ.ಸಿ. ಸಹಿತ ತುರ್ತು ಆವಶ್ಯಕತೆಗಳನ್ನು ಕಲ್ಪಿಸಲಾಗಿದೆ.

ಶಾಲೆಗಳಿಗೂ ಮಾಹಿತಿ

ಹೀಟ್ ವೇವ್ ಸಹಿತ ಬಿಸಿಲಿನ ಝಳ ಹೆಚ್ಚಿರುವ ಸಮಯದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ವಹಿಸಿ ಕೊಳ್ಳಬೇಕು ಎಂಬ ಬಗ್ಗೆ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಗೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ | ತಿಮ್ಮಯ್ಯ ತಿಳಿಸಿದ್ದಾರೆ.

ಮಕ್ಕಳ ಮೇಲೆ ನಿಗಾ ಇರಲಿ

ವಾತಾವರಣದಲ್ಲಿ ಅತಿಯಾದ ಶಾಖದ ಪರಿಣಾಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್ಚರ ಅಗತ್ಯ. ಅತೀ ಶಾಖದಿಂದಾಗಿ ಮಕ್ಕಳಲ್ಲಿ ಪ್ರಜ್ಞೆ ತಪ್ಪುವುದು, ಸ್ನಾಯುಗಳ ಸೆಳೆತ, ಅಪಸ್ಮಾರ, ತಲೆನೋವು, ಹೆಚ್ಚು ಬೆವರುವಿಕೆ, ಬಲಹೀನತೆ, ತಲೆ ಸುತ್ತುವುದು, ಗಲಿಬಿಲಿಗೊಂಡಂತೆ ಮಾತನಾಡುವುದು, ಉಸಿರಾಟ ಹಾಗೂ ಎದೆಬಡಿತದಲ್ಲಿ ಏರಿಕೆ, ವಾಕರಿಕೆ ಹಾಗೂ ವಾಂತಿಯಾಗುವುದು, ಹಾಸಿಗೆಯಿಂದ ಏಳಲು ಕಷ್ಟವಾಗುವುದು, ದೇಹದ ಉಷ್ಣತೆ 40.5 ಸೆ. ಗಿಂತ ಹೆಚ್ಚಾಗುತ್ತದೆ. ಈ ರೀತಿಯ ಸಮಸ್ಯೆ ಕಂಡುಬಂದರೆ ಪ್ರಥಮ ಚಿಕಿತ್ಸೆಯಾಗಿ ಮಗುವಿನ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಿರಿ, ಮಗುವನ್ನು ಮಲಗಿಸಿ, ಕಾಲನ್ನು ಸ್ವಲ್ಪ ಎತ್ತರದಲ್ಲಿರಿಸಿ, ಫ್ಯಾನ್ ಅನ್ನು ಬಳಸಿ, ಮಗುವಿಗೆ ಪ್ರಜ್ಞೆ ತಪ್ಪಿದ್ದಲ್ಲಿ ಕುಡಿಯಲು, ತಿನ್ನಲು ಕೊಡಬೇಡಿ, ತೀವ್ರ ರೋಗ ಲಕ್ಷಣ ಇದ್ದರೆ ತತ್‌ಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿರಿ.

ಶಾಖಾಘಾತದಿಂದ ರಕ್ಷಿಸಿಕೊಳ್ಳುವುದು ಹೇಗೆ?

-ಮಧ್ಯಾಹ್ನ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ.

-ಹೆಚ್ಚು ನೀರನ್ನು ಕುಡಿಯಿರಿ.

-ಹೆಚ್ಚು ಸಕ್ಕರೆಯುಕ್ತ ಪಾನೀಯಗಳು/ಕಾಬೋ।ನೇಟೆಡ್ ಪಾನೀಯ ಕುಡಿಯಬೇಡಿ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ.

-ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿರಿ.

– ಹೊರಾಂಗಣ ಕೆಲಸ ಮಾಡುವಾಗ ಆಗಾಗ್ಗೆ ವಿಶ್ರಾಂತಿ ಪಡೆಯಿರಿ.

ಪ್ರಥಮ ಚಿಕಿತ್ಸೆ ಕ್ರಮ

-ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು.

-ಕುಡಿಯಲು ಆಗಾಗ್ಗೆ ನೀರನ್ನು ಕೊಡುವುದು.

-ವ್ಯಕ್ತಿಯು ಚೇತರಿಸಿಕೊಂಡ ಬಳಿಕ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥ ನೀಡಬೇಕು.


Share with

Leave a Reply

Your email address will not be published. Required fields are marked *