ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಾಳೇಖಾನ್ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಕಾರೊಂದು ರಸ್ತೆ ಬದಿಯ ಕಂದಕಕ್ಕೆ ಬಿದ್ದ ಘಟನೆ ರವಿವಾರ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಹೊರನಾಡಿನತ್ತ ತೆರಳುತ್ತಿದ್ದ ಕಾರು, ಬಾಳೇಖಾನ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಚೆಗೆ ನುಗ್ಗಿ ಎರಡು ಬಾರಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ.
ಅಲ್ಪ ಅಂತರದಲ್ಲಿ ಪಾರು: ಕಾರು ಪಲ್ಟಿಯಾದ ವೇಗಕ್ಕೆ ಭೀಕರ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು, ಆದರೆ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕಕ್ಕೆ ಬಿದ್ದಿದ್ದ ಕಾರನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ.




