SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿಗೆ ಇದ್ದ ಅಂಕ ತೆಗೆದು, ಅವುಗಳಿಗೆ ಗ್ರೇಡ್ ನೀಡುವ ನೀತಿಯನ್ನು ಶಿಕ್ಷಣ ಇಲಾಖೆ ಘೋಷಿಸಿದೆ. ತೃತೀಯ ಭಾಷೆಯ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸಲಾಗುವುದಿಲ್ಲ. ಬದಲಾಗಿ ಅಂಕಗಳ ಆಧಾರದಲ್ಲಿ A, B, C, D ಗ್ರೇಡ್ ನೀಡಲಾಗುತ್ತದೆ. ಇದು SSLC ಫಲಿತಾಂಶದಲ್ಲಿ ಈ ಮೊದಲು ಇದ್ದ 625 ಅಂಕಗಳನ್ನು ಕಡಿಮೆ ಮಾಡಿದ್ದು, 525 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದು ಈ ವರ್ಷದಿಂದಲೇ ಜಾರಿಗೆ ಬರಲಿದೆ.

ತೃತೀಯ ಭಾಷೆ ಹಿಂದಿಗೆ ಅಂಕದ ಬದಲಿಗೆ ಗ್ರೇಡ್; ಸಭಾಪತಿ ಹೊರಟ್ಟಿ ಖಂಡನೆ
SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ, ಅಂಕದ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕಿಡಿಕಾರಿದ್ದಾರೆ. ‘1960ರಿಂದ ಬಂದ ಪದ್ಧತಿ ಬದಲಿಸುತ್ತಿರುವುದು ಸರಿಯಲ್ಲ. ಬೇರೆ ರಾಜ್ಯಗಳಲ್ಲಿ ಇಂಗ್ಲಿಷ್ ಹೊರತುಪಡಿಸಿದರೆ ಹಿಂದಿಯನ್ನೇ ಹೆಚ್ಚಾಗಿ ಮಾತನಾಡುತ್ತಾರೆ. ಈ ನಿರ್ಣಯ ಕೂಡಲೇ ಕೈಬಿಟ್ಟು, ಮೊದಲಿದ್ದ ನೀತಿಯನ್ನೇ ಅನುಸರಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ, ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ’ ಎಂದಿದ್ದಾರೆ.




