ಫಾಸ್ಟ್ಟ್ಯಾಗ್, ಯುಪಿಐ ಇದ್ದರಷ್ಟೇ ಟೋಲ್ ದಾಟಲು ಅನುಮತಿ, ಸರ್ಕಾರಿ ಗುರುತಿನ ಚೀಟಿ ಪ್ರದರ್ಶಿಸಿ ಟೋಲ್ ವಿನಾಯ್ತಿಯೂ ರದ್ದು

ನವದೆಹಲಿ: ಏ.10ರಿಂದ ಜಾರಿಯಾಗುವಂತೆ ದೇಶಾದ್ಯಂತ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಈ ಮೂಲಕ ದೇಶದ ಎಲ್ಲಾ ಟೋಲ್ಗಳನ್ನು ಡಿಜಿಟಲೀಕರಣಗೊಳಿಸುವತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮಹತ್ವದ ಹೆಜ್ಜೆಯನ್ನಿಟ್ಟಂತಾಗಿದೆ.
ಟೋಲ್ ಪ್ಲಾಜಾ ಹಾದು ಹೋಗಲು ಫಾಸ್ಟ್ಟ್ಯಾಗ್ ಇಲ್ಲದ ಪಕ್ಷದಲ್ಲಿ ಅಂತಹ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25ರಷ್ಟು ಹೆಚ್ಚುವರಿ ಹಣವನ್ನು ಚಾಲಕರು ಪಾವತಿಸಬೇಕಾಗುತ್ತದೆ. ಒಂದು ವೇಳೆ ಫಾಸ್ಟ್ಟ್ಯಾಗ್ ಮತ್ತು ಯುಪಿಐ ಎರಡೂ ಪಾವತಿ ವಿಧಾನಗಳನ್ನು ಚಾಲಕರು ನಿರಾಕರಿಸಿದರೆ, ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳಡಿ ವಾಹನ ಪ್ರವೇಶವನ್ನು ನಿರಾಕರಿಸಬಹುದು ಅಥವಾ ಇ-ನೋಟಿಸ್ ನೀಡಬಹುದು. 3 ದಿನಗಳವರೆಗೆ ಬಾಕಿ ದಂಡ ಪಾವತಿಸದಿದ್ದರೆ, ದಂಡದ ಮೊತ್ತವು ದುಪ್ಪಟ್ಟಾಗಬಹುದು ಎಂದು ಸೂಚಿಸಲಾಗಿದೆ.
ಟೋಲ್ ಪ್ಲಾಜಾಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜತೆಗೆ ವಾರ್ಷಿಕ ಫಾಸ್ಟ್ಟ್ಯಾಗ್ ಬಳಕೆಯನ್ನು ಉತ್ತೇಜಿಸಲೂ ಎನ್ಎಚ್ಎಐ ಮುಂದಾಗಿದೆ.
ಐಡಿ ಕಾರ್ಡ್ ಸಂಸ್ಕೃತಿಗೂ ಮಂಗಳ
ಖಾಸಗಿ ವಾಹನಗಳ ಚಾಲಕರು ಸರ್ಕಾರಿ ಗುರುತಿನ ಚೀಟಿಗಳನ್ನು ತೋರಿಸಿ ಅನೌಪಚಾರಿಕವಾಗಿ ಟೋಲ್ ವಿನಾಯಿತಿ ಪಡೆಯುವ ಪದ್ಧತಿಯನ್ನು ಕೊನೆಗೊಳಿಸಲಾಗಿದೆ. ವಿನಾಯಿತಿ ಪಡೆದ ವಿಶೇಷ ಫಾಸ್ಟ್ಟ್ಯಾಗ್ ಹೊಂದಿರುವ ಅಧಿಕೃತ ವಾಹನಗಳಿಗೆ ಮಾತ್ರ ಟೋಲ್ ಇಲ್ಲದೆ ಸಂಚರಿಸಲು ಅನುಮತಿಸಲಾಗುತ್ತದೆ. ಇದು ವಿನಾಯಿತಿಗಳ ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಜತೆಗೆ ಪಾಸ್ ಮಾನ್ಯತೆ ವಿಚಾರದಲ್ಲಿ ಟೋಲ್ ಸಿಬ್ಬಂದಿ ಮತ್ತು ಚಾಲಕರ ನಡುವೆ ಆಗಾಗ್ಗೆ ವರದಿಯಾಗುವ ವಾದ-ವಿವಾದಗಳನ್ನು ತಪ್ಪಿಸಲೂ ಸಹಕಾರಿ.




