ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2026 (IPL 2026) ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡ ಕೇವಲ 8 ರನ್ಗಳಿಗೆ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರ್ಸಿಬಿ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಡೆಲ್ಲಿ ತಂಡ ಪವರ್‌ಪ್ಲೇನಲ್ಲಿ ಅಂದರೆ ಮೊದಲ 6 ಓವರ್ಗಳಲ್ಲಿ ಕೇವಲ 13 ರನ್ ಕಲೆಹಾಕಿ ಬರೋಬ್ಬರಿ 6 ವಿಕೆಟ್ಗಳನ್ನು ಕಳೆದುಕೊಂಡಿದೆ.
ಮೊದಲ ಓವರ್ನಲ್ಲೇ ಶಾಕ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ಗೆ ವೇಗಿ ಭುವನೇಶ್ವರ್ ಕುಮಾರ್ ಓವರ್ನ ಎರಡನೇ ಎಸೆತದಲ್ಲೇ ಶಾಕ್ ನೀಡಿದರು. ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸಾಹಿಲ್ ಪರಾಖ್ ಎರಡನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆರ್ಸಿಬಿ ಪರ ಎರಡನೇ ಓವರ್ ಬೌಲ್ ಮಾಡಲು ಬಂದ ಹೇಜಲ್‌ವುಡ್, ಈ ಓವರ್ನ ಮೊದಲ ಎಸೆತದಲ್ಲಿ ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ನಂತದ ಎಸೆತದಲ್ಲೇ ಸಮೀರ್ ರಿಜ್ವಿ ಕೂಡ ಔಟ್ ಮಾಡಿದರು.
ನೋಡು ನೋಡುತ್ತಲೇ ಆರು ವಿಕೆಟ್
ಹೀಗಾಗಿ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಟ್ರಿಸ್ಟಾನ್ ಸ್ಟಬ್ಸ್ ಮೇಲೆ ಹೆಚ್ಚಿನ ಜವಾಬ್ದಾರಿ ಇತ್ತು. ಆದರೆ ಮೂರನೇ ಓವರ್ ಬೌಲ್ ಮಾಡಲು ಬಂದ ಭುವಿ, ಎರಡನೇ ಎಸೆತದಲ್ಲೇ ಸ್ಟಬ್ಸ್ ಅವರನ್ನು ಔಟ್ ಮಾಡಿದರು. ನಾಯಕ ಅಕ್ಷರ್ ಪಟೇಲ್ ಕೂಡ ಕೇವಲ ಮೂರು ಎಸೆತಗಳನ್ನು ಎದುರಿಸಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿದರು. ಪಟೇಲ್ ಕೂಡ ಖಾತೆ ತೆರೆಯಲು ವಿಫಲರಾದರು. ನಿತೀಶ್ ರಾಣಾ ಕೂಡ ಹೆಚ್ಚು ತೊಂದರೆ ನೀಡದೆ ಹೇಜಲ್‌ವುಡ್ಗೆ ಬಲಿಯಾದರು. ಹೀಗಾಗಿ ಡೆಲ್ಲಿ ನೋಡು ನೋಡುತ್ತಲೇ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಭುವಿ-ಹೇಜಲ್ವುಡ್ ಮಾರಕ ದಾಳಿ
ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ 6 ಓವರ್ಗಳಲ್ಲಿ ಕೇವಲ 13 ರನ್ ಕಲೆಹಾಕಿ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ 6 ವಿಕೆಟ್‌ಗಳನ್ನು ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಸಮವಾಗಿ ಹಂಚಿಕೊಂಡರು. ಅಂದರೆ ಭುವನೇಶ್ವರ್ 3 ಓವರ್ಗಳನ್ನು ಬೌಲ್ ಮಾಡಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದರೆ, ಇತ್ತ ಹೇಜಲ್‌ವುಡ್ ಕೂಡ 3 ಓವರ್ಗಳನ್ನು ಬೌಲ್ ಮಾಡಿ 8 ರನ್ ನೀಡಿ 3 ವಿಕೆಟ್ ಉರುಳಿಸಿದರು.





