ಸುಳ್ಯ: ಗುತ್ತಿಗಾರಿನಲ್ಲಿ ಯುವಕನೊಬ್ಬನನ್ನು ಆಂಧ್ರ ಪೊಲೀಸರು ಕಾರಿನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದ ವೇಳೆ ಅಪಹರಣ ಶಂಕೆಗೊಂಡ ಗ್ರಾಮಸ್ಥರು ವಾಹನವನ್ನು ಬೆನ್ನಟ್ಟಿ ತಡೆದ ಘಟನೆ ಬುಧವಾರ ಸಂಜೆ ನಡೆದಿದೆ.

ಸಚಿನ್ ಸಂಜೆ 6 ಗಂಟೆ ಸುಮಾರಿಗೆ ಗುತ್ತಿಗಾರಿನಲ್ಲಿ ಇದ್ದಾಗ ಕೆಲವರು ಬಂದು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಮಾಹಿತಿ ಪಡೆದ ಸ್ಥಳೀಯರು, ಯಾರೋ ಸಚಿನ್ ಅವರನ್ನು ಅಪಹರಿಸಿದ್ದಾರೆಂದು ಶಂಕಿಸಿ ಅವರ ಮಾವ ವೆಂಕಟ್‌ಗೆ ತಿಳಿಸಿದ್ದಾರೆ.
ಗುಂಡ್ಯ ಭಾಗದ ಕೆಲವು ಯುವಕರು ವಾಹನವನ್ನು ಬೆನ್ನಟ್ಟಿ ತಡೆದಿದ್ದಾರೆ ಎನ್ನಲಾಗಿದೆ. ಈ ವೇಳೆಗೆ ಗುತ್ತಿಗಾರಿನಿಂದ ಮತ್ತಷ್ಟು ಜನರು ಸ್ಥಳಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಹಾಗೂ ಆಂಧ್ರ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಎರಡೂ ಪಕ್ಷಗಳನ್ನು ಠಾಣೆಗೆ ಕರೆತಂದರು. ಬಳಿಕ ಠಾಣೆಯಲ್ಲಿ ನಡೆದ ಮಾತುಕತೆಯಲ್ಲಿ, ವಿಚಾರಣೆಗೆ ಸಹಕರಿಸುವಂತೆ ಸೂಚನೆ ನೀಡಿ ಸಚಿನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆನ್‌ಲೈನ್ ಗೇಮಿಂಗ್ ಶಂಕೆ
ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಬುಕ್ಕಿಯೊಬ್ಬನ ಫೋನ್ ಸಿಮ್‌ನಲ್ಲಿ ಸಚಿನ್ ಮೊಟ್ಟೆಮನೆ ಅವರ ಹೆಸರು ಪತ್ತೆಯಾಗಿದ್ದ ಹಿನ್ನೆಲೆ, ಅವರು ಕೂಡ ಆ ವ್ಯವಹಾರದಲ್ಲಿ ಭಾಗಿಯಾಗಿರಬಹುದೆಂಬ ಅನುಮಾನದ ಮೇರೆಗೆ ಆಂಧ್ರ ಪೊಲೀಸರು ವಿಚಾರಣೆಗೆ ಕರೆದೊಯ್ಯಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಮಧ್ಯಾಹ್ನವೇ ಗುತ್ತಿಗಾರಿಗೆ ಬಂದಿದ್ದ ಆಂಧ್ರ ಪೊಲೀಸರು, “ಸಚಿನ್ ಎಲ್ಲಿದ್ದಾರೆ? ಅವರಿಂದ ಅಡಿಕೆ ಸಸಿ ಪಡೆಯಲು ಬಂದಿದ್ದೇವೆ” ಎಂದು ಕೆಲವರ ಬಳಿ ವಿಚಾರಿಸಿಕೊಂಡಿದ್ದರು ಎನ್ನಲಾಗಿದೆ.




