ಅಂಬೇಡ್ಕರ್ ನಗರ(ಉತ್ತರಪ್ರದೇಶ): ಇಲ್ಲಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡ ಮೋಟಾರ್ ಸೈಕಲ್ ಸವಾರರ ನೆರವಿಗೆ ನೆರೆದಿದ್ದ ಜನರ ಗುಂಪಿನ ಮೇಲೆ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಎಂಟು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ರವಿವಾರ ರಾತ್ರಿ 11.30 ರ ಸುಮಾರಿಗೆ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ಪುರ್-ಅಕ್ಷರ್ಪುರ್ ರಸ್ತೆಯಲ್ಲಿರುವ ಅಶ್ರಫುರ್ ಭುವಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಎಎಸ್ಪಿ ತೇಜ್ವರ್ ಸಿಂಗ್ ತಿಳಿಸಿದ್ದಾರೆ.
ಎರಡು ಮೋಟಾರ್ ಸೈಕಲ್ಗಳು ಡಿಕ್ಕಿ ಹೊಡೆದಿದ್ದು, ಇಬ್ಬರು ಗಾಯಗೊಂಡಿದ್ದರು. ಸ್ಥಳೀಯರು ಅವರಿಗೆ ಸಹಾಯ ಮಾಡಲು ಸ್ಥಳದಲ್ಲಿ ಜಮಾಯಿಸಿದ್ದಾಗ, ವೇಗವಾಗಿ ಬಂದ ಕಾರು ಜನಸಮೂಹದ ಮೇಲೆ ನುಗ್ಗಿ ಭೀಕರ ಅಪಘಾತ ಸಂಭವಿಸಿದೆ.
ಮೃತ ದುರ್ದೈವಿ ಯುವಕರು ಕೈಫಿ (32), ಉತ್ತಮ್ ಕುಮಾರ್ (24), ಆದಿತ್ಯ ಕುಮಾರ್ (25), ಲಾಲ್ಟಂದ್ (24) ರಾಜು ಗುಪ್ತಾ (32), ಛೋಟು ಮತ್ತು ಇಬ್ಬರು ಅಪರಿಚಿತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.




