ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಬೀಚ್ ನಲ್ಲಿ ಮನೆಮಂದಿ ಜತೆ ಮಂಗಳವಾರ ಸಂಜೆ ವಿಹಾರಕ್ಕೆ ಆಗಮಿಸಿದ್ದ ಬಾಲಕ ಫೈಝಾನ್ (6) ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕ ಹುಬ್ಬಳ್ಳಿಯ ಮಹಮ್ಮದ್ ಗೌಸ್ ಅವರ ಪುತ್ರನಾಗಿದ್ದು, ಇವರ ಕುಟುಂಬ ಸದಸ್ಯರು ಮಂಜೇಶ್ವರ ಹೊಸಂಗಡಿಯಲ್ಲಿರುವ ಸಂಬಂಧಿ ಮನೆಗೆ ಬಂದಿದ್ದರು.
ಬಾಲಕನ ತಾಯಿ ಮತ್ತು ಇನ್ನೋರ್ವ ಕುಟುಂಬ ಸದಸ್ಯೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬಾಲಕ ಫೈಝಾನ್ ನನ್ನು ಕೂಡ ಸ್ಥಳೀಯರು ನೀರಿನಿಂದ ಮೇಲೆತ್ತಿದ್ದರು. ಆಗಲೇ ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಮನೆಯವರು ಹೊಸಂಗಡಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಂಗಳೂರು ತಲುಪುವ ವೇಳೆಗೆ ಆತ ಪ್ರಾಣ ತ್ಯಜಿಸಿದ್ದಾನೆ.
ಕುಂಬಳೆ ಕೋಸ್ಟಲ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕೇಸು ದಾಖಲಿಸಿಕೊಂಡಿದ್ದಾರೆ.




